ಯಾದಗಿರಿ : ಮೈಸೂರಿನಲ್ಲಿ ಮಹಿಷಾ (ದಸರಾ) ಉತ್ಸವ ಆಚರಣೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅನುಮತಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದರು.
ಯಾದಗಿರಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯರ ಸರ್ಕಾರ ಅಧಿಕಾರಕ್ಕೆ ಬಂದ್ಮೇಲೆ ಯಾವುದೇ ರೀತಿಯ ಬಿಗಿ ಕ್ರಮ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಭಾರತೀಯ ಸಂಸ್ಕೃತಿಗೆ, ಹಿಂದೂ ಸಂಸ್ಕೃತಿಗೆ ಅಪಮಾನ ಮಾಡಬೇಕು, ಅವಹೇಳನ ಮಾಡಬೇಕು ಎಂಬ ಷಡ್ಯಂತ್ರ ಮಾಡುವ ಸಂಘಟನೆಗಳು ಹುಟ್ಟಿಕೊಂಡಿವೆ. ಮೈಸೂರು ನಾಡ ದೇವತೆ ಚಾಮುಂಡಿಯ ಪವಿತ್ರ ಸ್ಥಳ. ಹಿಂದೆ ಮಹಾರಾಜರ ಕಾಲದಲ್ಲಿ ಚಾಮುಂಡಿಯ ಆಶೀರ್ವಾದ ಪಡೆದು ದಸರಾ ಉತ್ಸವ ಆಚರಣೆ ಮಾಡ್ತಿದ್ರು. ಅದೇ ಪರಂಪರೆಯನ್ನ ಯಾವುದೇ ಪಕ್ಷ ಅಧಿಕಾರ ಬಂದ್ರು ಆಚರಣೆ ಮಾಡ್ಕೊಂಡು ಬಂದಿವೆ ಎಂದರು.
ಇದಕ್ಕೆ ಸರ್ಕಾರ ಹಣ ನೀಡುತ್ತದೆ
ಇವತ್ತು ಕಾಂಗ್ರೆಸ್ ಪಕ್ಷದ ವತಿಯಿಂದ ಯಾವುದು ನಡೀತಾ ಇಲ್ಲ, ಸರ್ಕಾರದ ವತಿಯಿಂದ ನಡೀತಾ ಇದೆ. ದಸರಾ ಉತ್ಸವವನ್ನು ಸಿಎಂ ಉದ್ಘಾಟನೆ ಮಾಡ್ತಾರೆ. ಇದಕ್ಕೆ ಸರ್ಕಾರ ಹಣ ನೀಡುತ್ತದೆ. ಇಂತಹ ಉತ್ಸವವನ್ನ ವಿಕೃತಿಯಾಗಿ ಪ್ರತಿಬಿಂಬಿಸುವ ವ್ಯವಸ್ಥಿತ ವ್ಯಕ್ತಿಗಳು, ಸಂಘಟನೆಗಳು ದೇಶದಾದ್ಯಂತ ಕೆಲಸ ಮಾಡ್ತಿವೆ. ಅದರಲ್ಲಿ ಮೈಸೂರಿನ ಮಹಿಷಾಸುರ ಉತ್ಸವ ಆಚರಣೆ ಕೂಡ ಒಂದಾಗಿದೆ ಎಂದು ಕಿಡಿಕಾರಿದರು.