ಬೀದರ್ : ಕೃಷಿ ಭೂಮಿ ಫೋಡಿ ಮಾಡಿಕೊಡಲು ರೈತನಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಭ್ರಷ್ಟ ಸರ್ವೆಯರ್ ಲೋಕಾಯಕ್ತರ ಖೆಡ್ಡಾ ಬಿದ್ದಿರುವ ಘಟನೆ ಬೀದರ್ನಲ್ಲಿ ನಡೆದಿದೆ.
ಸರ್ವೆಯರ್ ಸಿದ್ದಾರ್ಥ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಭೂಪ. ಹಿಪ್ಪಳಗಾಂವ್ ಗ್ರಾಮದ ರೈತ ವೆಂಕಟರಾವ್ಎಂಬುವರ ಭೂಮಿ ನಾಲ್ವರು ಮಕ್ಕಳಿಗೆ ಫೋಡಿ ಮಾಡಿಕೊಡಲು ಅರ್ಜಿ ಹಾಕಲಾಗಿತ್ತು. ಸರ್ಕಾರದ ಫೀಸ್ ಕಟ್ಟಿದರೂ ಪ್ರತ್ಯೇಕವಾಗಿ 10 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದ ಸರ್ವೆಯರ್ ಸಿದ್ದಾರ್ಥನ ವಿರುದ್ಧ ರೈತ ವೆಂಕಟರಾವ್ ಲೋಕಾಯಕ್ತರಿಗೆ ದೂರು ನೀಡಿದ್ದರು.
ಪ್ರಕರಣವನ್ನ ಟ್ರ್ಯಾಪ್ ಮಾಡಿದ ಲೋಕಾಯುಕ್ತ ಅಧಿಕಾರಿಗಳು ಸರ್ವೆಯರ್ ಸಿದ್ದಾರ್ಥ ಲಂಚ ಪಡೆಯುತ್ತಿದ್ದ ವೇಳೆ ದಿಢೀರ್ ದಾಳಿ ನಡೆಸಿ ಬಲೆ ಬೀಸಿದ್ದಾರೆ. 6 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಡಿವೈಎಸ್ಪಿ ಎನ್.ಎಂ. ಓಲೇಕರ್ ಮತ್ತು ತಂಡ ದಾಳಿ ನಡೆಸಿ ಸರ್ವೆಯರ್ ಸಿದ್ದಾರ್ಥಗೆ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಎಲ್ಲಾ ಅಧಿಕಾರಿಗಳು ಇದರಲ್ಲಿ ಶಾಮೀಲು
ಇನ್ನು ಇದೇ ವೇಳೆ ಮಾತನಾಡಿದ ರೈತ ವೆಂಕಟರಾವ್, ಬೀದರ್ ತಹಶೀಲ್ದಾರ್ ಕಚೇರಿ ಅಂದ್ರೆ ಲೂಟಿ ಹೊಡೆಯೊ ಕಚೇರಿಯಂತಾಗಿದೆ. ಇಲ್ಲಿಗೆ ಯಾವುದೇ ಕೆಲಸ ಆಗಬೇಕೆಂದರೂ ಲಂಚ ಕೊಡಲೇಬೇಕಾದಂತ ಪರಿಸ್ಥಿತಿ ನಿರ್ಮಾಣಗೊಂಡಿದೆ. ಅವರು ಇವರು ಅಂತಲ್ಲ ಎಲ್ಲಾ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದಾರೆ. ರೈತರು ಅಂತ ನೋಡದೇ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.