ಮೈಸೂರು : ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಮತ್ತು ಚಾಮುಂಡಿ ಚಲೋ ವಿಚಾರದಲ್ಲಿ ಗೊಂದಲ ಮುಂದುವರಿದಿದೆ. ನಾಳೆ ಚಾಮುಂಡಿ ಬೆಟ್ಟಕ್ಕೆ ಭಕ್ತಿರಿಗೂ ನಿರ್ಬಂಧ ವಿಧಿಸಲಾಗಿದೆ.
ಎರಡು ಗುಂಪುಗಳ ನಡುವೆ ಸಂಘರ್ಷದ ಸ್ಥಿತಿ ನಿರ್ಮಾಣಗೊಂಡಿರುವ ಹಿನ್ನೆಲೆಯಲ್ಲಿ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಮೈಸೂರು ನಗರ ಪೊಲೀಸ್ ಆಯುಕ್ತರು ಇಡೀ ನಗರದಲ್ಲಿ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಇದರ ನಡುವೆಯೇ ಜಿಲ್ಲಾಧಿಕಾರಿಗಳು ಇನ್ನೊಂದು ಆದೇಶ ಹೊರಡಿಸಿ ಬೆಳಗ್ಗಿನಿಂದ ಸಂಜೆವರೆಗೆ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದಾರೆ.
ಮಹಿಷ ದಸರಾ ಆಚರಣೆ ಸಮಿತಿ ಆಯೋಜಿಸಿದ್ದ ಮಹಿಷ ದಸರಾಕ್ಕೆ ಮೊದಲು ಅವಕಾಶ ನಿರಾಕರಿಸಿದ್ದ ಪೊಲೀಸರು, ಇದೀಗ ಷರತ್ತುಬದ್ಧ ಅನುಮತಿಯನ್ನು ನೀಡಿದ್ದಾರೆ. ಅಂದರೆ ಚಾಮುಂಡಿ ಬೆಟ್ಟದ ಮೇಲೆ ಮಹಿಷನ ಮೂರ್ತಿಗೆ ಮಾಲಾರ್ಪಣೆ ಮಾಡುವುದು, ಮೆರವಣಿಗೆ ನಡೆಸುವ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ಬದಲಾಗಿ ಪುರಭವನದಲ್ಲಿ ಮಾತ್ರ ಕಾರ್ಯಕ್ರಮ ನಡೆಸಬಹುದು ಎಂದಿದ್ದಾರೆ.
ಮತ್ತೊಂದೆಡೆ ಬಿಜೆಪಿ ಆಯೋಜಿಸಿದ ‘ಚಾಮುಂಡಿ ಚಲೋ’ ಕಾರ್ಯಕ್ರಮಕ್ಕೆ ಅವಕಾಶ ನಿರಾಕರಿಸಲಾಗಿದೆ. ಇದರಿಂದ ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ.