ಚಿಕ್ಕಮಗಳೂರು : ಮೂಡಿಗೆರೆ ತಾಲೂಕಿನ ಐತಿಹಾಸಿಕ ಹಾಗೂ ಪ್ರವಾಸಿ ತಾಣ ದೇವರ ಮನೆ ಪ್ರವಾಸಕ್ಕೆ ಬಂದಿದ್ದ ಬೆಳ್ತಂಗಡಿ ತಾಲೂಕಿನ ಕೊಟ್ಟೂರು ಗ್ರಾಮದ ದೀಕ್ಷತ್ ಅಕ್ಟೋಬರ್ 10 ರಂದು ಸಂಜೆ ನಾಪತ್ತೆಯಾಗಿದ್ದ. ಇದೀಗ ಅಕ್ಟೋಬರ್ 11 ರಂದು ಬೆಳಗ್ಗೆ ಮನೆಯ ಹತ್ತಿರದ ಮೋರಿ ಬಳಿ ಕುಳಿತಿದ್ದನ್ನು ಊರವರು ಪತ್ತೆ ಹಚ್ಚಿ ಮನೆಗೆ ಸೇರಿಸಿದ್ದಾರೆ.
ಪ್ರಕರಣ ಸಂಬಂಧಿಸಿದಂತೆ ಸ್ಥಳೀಯರು ಹಾಗೂ ಬಣಕಲ್ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಹುಡುಕಾಟ ನಡೆಸಿದ್ದರು. ಬೆಳ್ತಂಗಡಿ ತಾಲೂಕಿನ ಕೊಟ್ಟೂರು ಗ್ರಾಮದ ಅರಂತೊಟ್ಟು ದೀಕ್ಷಿತ್ ಪೂಜಾರಿ, ಸಂಪಾಜೆ ನಿವಾಸಿ ದೀಕ್ಷಿತ್ ಗೌಡ, ಜಾರ್ಲೋಟ್ಟು ನಿವಾಸಿ ಕಿರೋತ್ ಪೂಜಾರಿ, ಅಡೆಂಕಿಲೊಟ್ಟು ನಿವಾಸಿ ಸುದರ್ಶನ್ ಗೌಡ ಒಂದೇ ಊರಿನವರಾಗಿದ್ದು, ಇವರೆಲ್ಲ ದೇವರ ಮನೆಗೆ ಕಾರಿನಲ್ಲಿ ಹೋಗಿದ್ದರು.
ದೇವರ ಮನೆಗೆ ಪ್ರವಾಸಕ್ಕೆ ಬಂದಿದ್ದು, ಪ್ರವಾಸ ಮುಗಿಸಿ ಹಿಂದಿರುಗುವಾಗ ಯುವಕರ ನಡುವೆ ಯಾವುದೋ ವಿಚಾರದಲ್ಲಿ ಗಲಾಟೆ ನಡೆದು ಹೊಡೆದಾಟ ಮಾಡಿಕೊಂಡಿದ್ದರು. ನಂತರ ಕೋಪದಿಂದ ದೀಕ್ಷಿತ್ ಪೂಜಾರಿ ಬೇರೆಯಾಗಿ ಹೋಗಿದ್ದ. ದೇವರ ಮನೆ ಸುತ್ತಮುತ್ತ ಮಂಜು ಕವಿದಿದ್ದರಿಂದ ಹುಡುಕಾಟಕ್ಕೆ ಅಡಚಣೆಯಾಗಿದ್ದು, ಇಂದು ಕಾರ್ಯಾಚರಣೆ ಮುಂದುವರೆಸಿದ್ದರು. ಇದೀಗ ಯುವಕ ಬೇರೆ ವಾಹನದ ಮೂಲಕ ಊರಿಗೆ ಮರಳಿರುವ ಬಗ್ಗೆ ಬಣಕಲ್ ಪೊಲೀಸರಿಗೆ ಮನೆ ಮಂದಿ ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಯುವಕನ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.