Monday, November 25, 2024

ಡಿಸಿಎಂ ಕಾಲಿಗೆ ಬಿದ್ದ ಶಾಸಕ : ಅನುದಾನ ವಿಚಾರದಲ್ಲಿ ಡಿಕೆಶಿ-ಮುನಿರತ್ನ ‘ಕುರುಕ್ಷೇತ್ರ’

ಬೆಂಗಳೂರು : ಕ್ಷೇತ್ರದ ಅಭಿವೃದ್ಧಿಗೆ 126 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಶಾಸಕರೊಬ್ಬರು ಉಪಮುಖ್ಯಮಂತ್ರಿ ಕಾಲಿಗೆ ಬಿದ್ದ ಪ್ರಸಂಗ ನಡೆದಿದೆ. ಬೆಂಗಳೂರಿನ ಆರ್.ಆರ್ ನಗರ ಬಿಜೆಪಿ ಶಾಸಕ ಮುನಿರತ್ನ ಡಿಸಿಎಂ ಡಿ.ಕೆ ಶಿವಕುಮಾರ್ ಕಾಲಿಗೆ ಬಿದ್ದು ಅನುದಾನದ ಬೇಡಿಕೆ ಇಟ್ಟಿದ್ದಾರೆ. ಇದಕ್ಕೂ ಮೊದಲು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಮುನಿರತ್ನ ಮೌನ ಪ್ರತಿಭಟನೆ ನಡೆಸಿದರು.

ಆರ್‌.ಆರ್‌ ನಗರ ಕ್ಷೇತ್ರಕ್ಕೆ 126 ಕೋಟಿ ಅನುದಾನ ತಡೆ ವಿಚಾರವಾಗಿ ಅರಮನೆ ಮೈದಾನದಲ್ಲಿ ಹೈಡ್ರಾಮ ನಡೆದಿದೆ. ಬೆಂಗಳೂರು ಕಂಬಳ ವಿಚಾರವಾಗಿ ಅರಮನೆ ಮೈದಾನದಲ್ಲಿ ಸಿದ್ದತಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಭೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಕೂಡಾ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಅರಮನೆ ಮೈದಾನಕ್ಕೆ ಆಗಮಿಸಿದ ಮುನಿರತ್ನ ವೇದಿಕೆಯ ಕೆಳಗೆ ಕುಳಿತುಕೊಂಡರು. ಈ ವೇಳೆ ಪೊಲೀಸರು ಮತ್ತು ಮುನಿರತ್ನ ನಡುವೆ ಮಾತಿನ ಚಕಮಕಿ ನಡೆಯಿತು.

ಡಿಕೆಶಿ ನಿವಾಸಕ್ಕೆ ಮುನಿರತ್ನ ಭೇಟಿ

ಇನ್ನೂ ಮುನಿರತ್ನ ಕಾರ್ಯಕ್ರಮಕ್ಕೆ ಆಗಮಿಸಿದ್ದನ್ನ ಗಮನಿಸಿದ ಡಿಕೆಶಿ, ಯಾರೋ ಡ್ರಾಮಾ ಮಾಡಲು ಬಂದಿದ್ದಾರೆ‌. ಡ್ರಾಮಾ ನೋಡೋಣ ಎಂದು ಮುನಿರತ್ನ ಅವರನ್ನ ಕೆಣಕಿದ್ರು. ಇನ್ನು ವೇದಿಕೆಯಿಂದ ಕೆಳಗೆ ಬರುತ್ತಿದ್ದಂತೆ ಬಹಿರಂಗವಾಗಿಯೇ ಡಿಕೆಶಿ ಕಾಲಿಗೆ ಬಿದ್ದ ಮುನಿರತ್ನ ಅನುದಾನಕ್ಕಾಗಿ ಬೇಡಿಕೆ ಇಟ್ಟರು. ಅರಮನೆ ಮೈದಾನ ಹೈಡ್ರಾಮ ಬೆನ್ನಲ್ಲೇ ಡಿಸಿಎಂ ಡಿ.ಕೆ ಶಿವಕುಮಾರ್ ನಿವಾಸಕ್ಕೂ ಮುನಿರತ್ನ ಭೇಟಿ ನೀಡಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ

ಬೆಳಗ್ಗೆ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಅನುದಾನ ಬಿಡುಗಡೆಗೆ ಆಗ್ರಹಿಸಿ ಬಿಜೆಪಿ ಶಾಸಕ ಮುನಿರತ್ನ ಮೌನ ಪ್ರತಿಭಟನೆ ನಡೆಸಿದರು. ಈ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಗಮಿಸಿ ಮುನಿರತ್ನ ಅವರಿಗೆ ಬೆಂಬಲ ಸೂಚಿಸಿದರು.

ಒಟ್ನಲ್ಲಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅನುದಾನದ ವಿಚಾರ ಸಾಕಷ್ಟು ತಾರಕಕ್ಕೇರುತ್ತಿದೆ. ಒಂದು ಕಡೆ ಅನುದಾನದ ವಿಚಾರವಾಗಿ ಬಿಜೆಪಿ ನಾಯಕರು ಸರ್ಕಾರದ ವಿರುದ್ದ ಪ್ರತಿಭಟನೆಗೆ ಮುಂದಾಗ್ತಿರೋದು ಸಿಎಂ ಸಿದ್ದರಾಮಯ್ಯನವರ ತಲೆನೋವಿಗೂ ಕಾರಣವಾಗುತ್ತೆ ಎಂಬ ರಾಜಕೀಯ ಚರ್ಚೆಗಳು ಶುರುವಾಗಿದೆ.

RELATED ARTICLES

Related Articles

TRENDING ARTICLES