ಮಂಡ್ಯ : ಪಾಕಿಸ್ತಾನ ಹಾಗೂ ಭಾರತ ಕುಳಿತು ಮಾತನಾಡಿಕೊಂಡಿದೆ. ಎರಡು ರಾಜ್ಯಗಳು ಕುಳಿತು ಮಾತನಾಡಲು ಯಾಕೆ ಸಾಧ್ಯವಿಲ್ಲ? ರಾಜ್ಯ ಸರ್ಕಾರದ ಜೊತೆ ಮೂರು ಸಭೆಯಲ್ಲಿ ಭಾಗವಹಿಸಿದ್ದೇನೆ. ಚರ್ಚೆ ಆಗಿದೆ ಅಷ್ಟೇ.. ಪರಿಹಾರ ಕ್ರಮ ಈವರೆಗೆ ಆಗಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಕುಟುಕಿದರು.
ಕೇಂದ್ರ ಸರ್ಕಾರ ಮಧ್ಯಪ್ರವೇಶಕ್ಕೆ ತಮಿಳುನಾಡು ಸರ್ಕಾರ ನಿರ್ಣಯ ವಿಚಾರವಾಗಿ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಲ್ಲ ಎಂದಿದೆ. CWMA ನಿರ್ಧಾರವೇ ಅಂತಿಮವಾಗಿದೆ. ಸುಪ್ರೀಂ ಕೋರ್ಟ್ ಹಾಗೇ ಹೇಳಿದ ಮೇಲೆ ಇನ್ಯಾರು ಮಧ್ಯಪ್ರವೇಶ ಮಾಡಲು ಸಾಧ್ಯ? ಎಂದರು.
ತಮಿಳುನಾಡು ಮೊದಲಿನಿಂದಲೂ ಕಾವೇರಿ ನೀರಿನ ವಿಚಾರದಲ್ಲಿ ಒತ್ತಡ ಹೇರುತ್ತಿದೆ. ಕರ್ನಾಟಕ ಸರ್ಕಾರ ಇದರಲ್ಲಿ ವಿಫಲವಾಗಿದೆ. ನಮ್ಮ ಅಧಿಕಾರಿಗಳು ಸರಿಯಾದ ವಾದ ಮಾಡುವಲ್ಲಿ ವಿಫಲರಾಗಿದ್ದಾರೆ. ಸರ್ಕಾರ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಸಮಸ್ಯೆಗೆ ಪರಿಹಾರ ಹುಡುಕಬೇಕು. ನನ್ನ ಕೈಲಿ ಆಗಿಲ್ಲ ಅಂದ್ರೆ ನಿಮ್ಮ ಕಡೆ ತೋರಿಸುವುದು ಸುಲಭ. ಆದರೆ, ಸಮಸ್ಯೆಗೆ ಪರಿಹಾರ ಹುಡುಕುವುದು ಮುಖ್ಯ ಎಂದು ಹೇಳಿದರು.
ಪಿಎಂ ಒಂದು ರಾಜ್ಯದ ಪರ ಇರಲು ಆಗಲ್ಲ
ಇಡೀ ದೇಶಕ್ಕೆ ಪ್ರಧಾನಮಂತ್ರಿ ಆಗಿರುವವರು ಒಂದು ರಾಜ್ಯದ ಪರವಾಗಿ ಮಾತನಾಡಲು ಸಾಧ್ಯವಿಲ್ಲ. I.N.D.I.A (ಇಂಡಿಯಾ) ಒಕ್ಕೂಟ ಮಾಡಿಕೊಂಡಿದ್ದಾರೆ, ಮಾತನಾಡಿ ಬಗೆಹರಿಸಬಹುದು. ಮುಖ್ಯಮಂತ್ರಿಗಳು ಒಂದು ಜಿಲ್ಲೆ ಪರ ಮಾತನಾಡಲು ಸಾಧ್ಯವಿಲ್ಲ. ಹಾಗೆಯೇ ಸಂಸದರು (ಪಿಎಂ) ಕೂಡ ಒಂದು ರಾಜ್ಯದ ಪರ ಇರಲು ಆಗಲ್ಲ ಎಂದು ಸುಮಲತಾ ಅಂಬರೀಶ್ ತಿರುಗೇಟು ನೀಡಿದರು.