ಶಿವಮೊಗ್ಗ : ಪ್ರಚೋದನಾತ್ಮಕ ಹೇಳಿಕೆ ಹರಿಬಿಟ್ಟ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರಿಗೆ ಸಂಕಷ್ಟ ಎದುರಾಗಿದ್ದು, ಶಿವಮೊಗ್ಗದಲ್ಲಿ ಸುಮೋಟೋ ಕೇಸ್ ದಾಖಲಾಗಿದೆ.
ಹಿಂದೂಗಳು ಮನೆಯಲ್ಲಿ ತಲ್ವಾರ್ ಇಟ್ಟುಕೊಳ್ಳಬೇಕು, ಆಯುಧ ಪೂಜೆ ದಿನ ಪೂಜೆ ಮಾಡಬೇಕು. ಮತಾಂಧರಿಗೆ ಉತ್ತರ ನೀಡುವ ಸಂದರ್ಭ ಬರಬಹುದು ಎಂದು ಹಿಂದೂಪರ ಮುಖಂಡ ಅರುಣ್ ಪುತ್ತಿಲ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಪುತ್ತಿಲ ಅವರ ಹೇಳಿಕೆ ವಿರುದ್ಧ ಇದೀಗ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ.
ನಗರದ ರಾಗಿಗುಡ್ಡಕ್ಕೆ ಶುಕ್ರವಾರ ಭೇಟಿ ನೀಡಿದ ಅವರು ಸಂತ್ರಸ್ತರ ಮನೆಗಳಿಗೆ ತೆರಳಿ ಸಾಂತ್ವಾನ ಹೇಳಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ‘ಸರ್ಕಾರ ತಲ್ವಾರ್ ಹಿಡಿದು ಮೆರವಣಿಗೆಗೆ ಅವಕಾಶ ಕೊಡ್ತಾರೆ ಅಂದ್ರೆ. ನಮ್ಮಲ್ಲೂ ತಲ್ವಾರ್, ಶಸ್ತ್ರಾಸ್ತ್ರ ಇದೆ. ಅಗತ್ಯ ಬಿದ್ದರೆ ಇದೇ ಶಸ್ತ್ರಾಸ್ತ್ರ ಮೂಲಕ ಪ್ರತಿಕ್ರಿಯೆ ಕೊಡಲು ಹಿಂದೂ ಸಮಾಜ ಸಿದ್ದವಿದೆ. ನವರಾತ್ರಿ ದಿನ ಶಸ್ತ್ರಾಸ್ತ್ರಗಳಿಗೆ ಪೂಜೆ ಮಾಡ್ತೇವೆ. ಪ್ರತಿ ಮನೆಯಲ್ಲಿಯೂ ತಲ್ವಾರ್ ಗಳಿಗೆ ಪೂಜೆ ಮಾಡಬೇಕು. ಸ್ಕ್ಯೂಡ್ರೈವರ್, ಸ್ಯ್ಪಾನರ್ ಕೈ ಬಿಡಿ. ತಲ್ವಾರ್ ಗಳಿಗೆ ಪೂಜೆ ಮಾಡಿ’ ಎಂದು ಹೇಳಿದ್ದರು.