ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಮೆಡಿಕಲ್ ಸೀಟ್ ದೋಖಾ ಮಾಡಿರುವುದು ಬೆಳಕಿಗೆ ಬಂದಿದೆ. ಮೆಡಿಕಲ್ ಸೀಟ್ ಕೊಡಿಸುವ ಆಮಿಷವೊಡ್ಡಿ ಲಕ್ಷ ಲಕ್ಷ ಗುಳುಂ ಮಾಡಿರುವ ಘಟನೆ ವರದಿಯಾಗಿದೆ.
ಮೈಸೂರು ಮೂಲದ ವಿದ್ಯಾರ್ಥಿಯಿಂದ ಲಕ್ಷಾಂತರ ರೂಪಾಯಿ ಪಡೆದು ವಂಚನೆ ಮಾಡಲಾಗಿದೆ. ಬೆಂಗಳೂರು ನಗರದ ಕನ್ನಿಂಗ್ ಹ್ಯಾಮ್ ರಸ್ತೆಯ ಸಂಸ್ಥೆಯಿಂದ ವಂಚನೆ ಮಾಡಿರುವುದು ಬೆಳಕಿಗೆ ಬಂದಿದ್ದು, ಮೋಸ ಹೋಗಿರುವ ವಿದ್ಯಾರ್ಥಿ ಕಣ್ಣೀರು ಹಾಕುತ್ತಿದ್ದಾನೆ.
ನೀಟ್ ಫೇಲಾದವರ ಪಟ್ಟಿಯಲ್ಲಿ ವಿದ್ಯಾರ್ಥಿಗಳನ್ನು ಹುಡುಕಿ ಮೋಸ ಮಾಡುವ ಕಂಪನಿಯೊಂದು ವಿದ್ಯಾರ್ಥಿಯ ಅಣ್ಣನ ಮೊಬೈಲ್‌ಗೆ ಮೆಡಿಕಲ್ ಸೀಟ್ ಕೊಡಿಸುವುದಾಗಿ ಮೆಸೇಜ್ ಮಾಡಿದೆ. ಇದಾದ ಕೆಲವೇ ಕ್ಷಣಗಳಲ್ಲಿ ಮೊಬೈಲ್‌ಗೆ ಕರೆ ಮಾಡಿದ ಅನಾಮಿಕರು, ನಾಲ್ಕೈದು ವರ್ಷಗಳಿಂದ ಮೆಡಿಕಲ್ ಸೀಟ್ ಕೊಡಿಸುತ್ತಿದ್ದೇವೆ. ನಿಮ್ಮ ಮಗನಿಗೆ ದಾವಣಗೆರೆಯಲ್ಲಿ ಸೀಟ್ ಕೊಡಿಸುತ್ತೇವೆ ಎಂದು ಡೀಲ್ ಮಾಡಿಕೊಂಡಿದ್ದಾರೆ.
10.80 ಲಕ್ಷ ರೂ. ವಸೂಲಿ ಮಾಡಿದ ಗ್ಯಾಂಗ್
ಮೆಡಿಕಲ್ ಸೀಟ್ ಕನ್ಫರ್ಮ್ ಹೆಸರಲ್ಲಿ ಒಟ್ಟು 10.80 ಲಕ್ಷ ರೂ. ವಸೂಲಿ ಮಾಡಿದ ಗ್ಯಾಂಗ್‌ಗೆ ಮೆಡಿಕಲ್ ಸೀಟ್ ಬಗ್ಗೆ ಸಿಕ್ಕಿಲ್ಲವೆಂದು ಅಭ್ಯರ್ಥಿಯ ಪೋಷಕರು ಹೇಳಿದ್ದಾರೆ. ಇದಾದ ನಂತರ ಲಿಸ್ಟ್ ಬರುತ್ತದೆ ಎಂದು ಹೇಳಿದ ಅಸಾಮಿಗಳು ನಂತರ ಪೋನ್ ಸ್ವೀಕರಿಸದೆ ಸೈಲೆಂಟ್ ಆಗಿದ್ದಾರೆ. ತಾವು ಮೋಸ ಹೋಗಿರುವ ಬಗ್ಗೆ ಅರಿತುಕೊಂಡ ವಿದ್ಯಾರ್ಥಿಯ ಪೋಷಕರು 5 ಜನರ ದೋಖಾ ಗ್ಯಾಂಗ್‌ನ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದರ ಬೆನ್ನಲ್ಲಿಯೇ ವಂಚನೆ ಮಾಡಿದ್ದ ಐವರನ್ನ ಬಂಧಿಸಿದ ಪೊಲೀಸರು ಈಗ ವಿಚಾರಣೆ ನಡೆಸುತ್ತಿದ್ದು, ಮತ್ತಷ್ಟು ಪ್ರಕರಣಗಳು ಹೊರಬರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.