ಬೆಳಗಾವಿ : ಕೇಂದ್ರದಿಂದ ರಾಜ್ಯಕ್ಕೆ ಬರ ಅಧ್ಯಯನ ಮಾಡಲು ಅಧಿಕಾರಿಗಳ ತಂಡ ಆಗಮಿಸಿದ್ದು, ಬರ ಅಧ್ಯಯನ ನಡೆಸುತ್ತಿದೆ. ಬೆಳಗಾವಿ ಜಿಲ್ಲೆಗೆ ಬರ ಅಧ್ಯಯನಕ್ಕೆಂದು ಅಧಿಕಾರಿಗಳ ತಂಡ ಆಗಮಿಸಿದಾಗ ರೈತನೋರ್ವ ವಿಷದ ಬಾಟಲ್ ಹಿಡಿದು ಬಂದಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕುಲಕುಪ್ಪಿ ಗ್ರಾಮದ ಬಳಿ ರೈತ ಅಪ್ಪಾಸಾಬ್ ಲಕ್ಕುಂಡಿ ಎಂಬುವವರು ವಿಷದ ಬಾಟಲ್ ಹಿಡಿದು ವಿಷ ಕುಡಿಯಲು ಮುಂದಾಗಿದ್ದಾರೆ.
40 ಎಕರೆ ಪ್ರದೇಶದಲ್ಲಿ ಬೆಳೆ ಬೆಳೆದಿದ್ದೇನೆ. ಆದರೆ, ಮಳೆ ಇಲ್ಲದೇ ಬೆಳೆದ ಬೆಳೆ ಹಾಳಾಗಿದೆ. ಯಾರೂ ರೈತರ ಕಷ್ಟವನ್ನು ಕೇಳುತ್ತಿಲ್ಲ. ಸರ್ಕಾರ ನಮಗೆ ಯಾವ ಗ್ಯಾರಂಟಿಯನ್ನೂ ಸಹ ನೀಡುತ್ತಿಲ್ಲ. ಹೀಗಾಗಿ ಮನನೊಂದು ನಾನು ಆತ್ಮಹತ್ಯೆಗೆ ಯತ್ನಿಸಿದೆ. ಸರ್ಕಾರ ನಮ್ಮ ರಕ್ಷಣೆಗೆ ನಿಲ್ಲಬೇಕು. ಶೇಂಗಾ, ಹುರುಳಿ, ಸೋಯಾಬಿನ್ ಎಲ್ಲವೂ ಹಾಳಾಗಿದೆ ಎಂದು ರೈತ ಅಪ್ಪಾಸಾಬ್ ಅಳಲು ತೋಡಿಕೊಂಡಿದ್ದಾರೆ.
ರಾಜ್ಯದ ವಿವಿಧೆಡೆ ಬರ ಅಧ್ಯಯನ
ಕೇಂದ್ರ ನೀರು ಆಯೋಗದ ನಿರ್ದೇಶಕ ವಿ.ಅಶೋಕ್ ಕುಮಾರ್ ನೇತೃತ್ವದ ಬರ ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸಿದೆ. ಚಿಕ್ಕಬಳ್ಳಾಪುರ, ಬೆಳಗಾವಿ, ಗದಗ ಹಾಗೂ ಇತರ ಜಿಲ್ಲೆಗಳಿಗೆ ಭೇಟಿ ನೀಡಿ, ಬರ ಅಧ್ಯಯನ ನಡೆಸಿದೆ. ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಅಧಿಕಾರಿಗಳು ಬರ ಪರಿಸ್ಥಿತಿ, ಮಳೆ ಪ್ರಮಾಣ, ಬಿತ್ತನೆ ಪ್ರಮಾಣ, ಬೆಳೆ ನಷ್ಟದ ಮಾಹಿತಿಯನ್ನು ಪಡೆದರು.