ಚಾಮರಾಜನಗರ : ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ಚಾಮರಾಜನಗರದಲ್ಲಿ ಕಳೆದ 1 ತಿಂಗಳಿನಿಂದಲೂ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದು ಇಂದು ಗುಜರಿ ವಸ್ತುಗಳನ್ನು ಹಿಡಿದು ಆಕ್ರೋಶ ಹೊರಹಾಕಿದರು.
ರಾಜ್ಯ ಸರ್ಕಾರ, ತಮಿಳುನಾಡು ಸರ್ಕಾರ ಹಾಗೂ ಕೇಂದ್ರ ಸರ್ಕಾರ ರೈತರು, ಕನ್ನಡಿಗರ ಪಾಲಿಗೆ ಗುಜರಿ ಸರ್ಕಾರಗಳಾಗಿವೆ ಎಂಬುದನ್ನು ತೋರಿಸಲು ಮುರುಕಲು ಸೈಕಲ್, ಹಳೇ ಕಬ್ಬಿಣ, ಖಾಲಿ ಸೀಸೆಗಳನ್ನು ಹಿಡಿದು ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಭುವನೇಶ್ವರಿ ವೃತ್ತದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿದರು.
ರಾಜ್ಯದ ಜನರ ಹಿತ ಕಾಯದೇ ನಿರಂತರವಾಗಿ ನೀರು ಹರಿಸುತ್ತಿರುವ ಕರ್ನಾಟಕ ಸರ್ಕಾರ, ಮಾತನಾಡದ ಜನಪ್ರತಿನಿಧಿಗಳು, ಮಧ್ಯಸ್ಥಿಕೆ ವಹಿಸದ ಕೇಂದ್ರ ಸರ್ಕಾರ, ಕಾವೇರಿ ಕ್ಯಾತೆ ತೆಗೆಯುವ ತಮಿಳುನಾಡು ಸರ್ಕಾರ ಯಾವುದಕ್ಕೂ ಉಪಯೋಗಕ್ಕೆ ಬಾರದ ಗುಜರಿ ಸರ್ಕಾರಗಳಾಗಿವೆ ಎಂದು ಆಕ್ರೋಶ ಹೊರಹಾಕಿದರು. ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರಿಂದ ವಾಹನ ಸಂಚಾರವೂ ಅಸ್ತವ್ಯಸ್ತವಾಗಿತ್ತು.
ಕಾವೇರಿಗಾಗಿ ಹೆದ್ದಾರಿ ತಡೆ
ಮಂಡ್ಯದ ಸಂಜಯ ವೃತ್ತದಲ್ಲಿ ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ನೇತೃತ್ವದಲ್ಲಿ ಕಾವೇರಿಗಾಗಿ ಕೈಯಲ್ಲಿ ಖಾಲಿ ತೆಂಗಿನ ಕಾಯಿ ಚಿಪ್ಪು ಹಿಡಿದು ಪ್ರತಿಭಟನೆ ನಡೆಸಲಾಯಿತು. ರಾಜ್ಯ ಸರ್ಕಾರ ರಾಜ್ಯದ ರೈತರಿಗೆ ಖಾಲಿ ಚಿಪ್ಪು ನೀಡಿದೆ ಎಂದು ಕಿಡಿಕಾರಿದರು. ಸಂಜಯ ವೃತ್ತದಿಂದ ವಿಶ್ವೇಶ್ವರಯ್ಯ ಪ್ರತಿಮೆವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತ ಹಿತ ರಕ್ಷಣಾ ಸಮಿತಿ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿತು.