ಬೆಂಗಳೂರು : 2,000 ರೂಪಾಯಿ ಮುಖಬೆಲೆಯ ಪಿಂಕ್ ನೋಟುಗಳನ್ನು ಬದಲಿಸಿಕೊಳ್ಳಲು ನಾಳೆಯೇ (ಅಕ್ಟೋಬರ್ 7) ಕೊನೆಯ ದಿನವಾಗಿದೆ.
ಆರ್‌ಬಿಐ (RBI) ಕಳೆದ ಮೇ 19ರಂದು 2,000 ರೂಪಾಯಿ ಮುಖಬೆಲೆಯ ಪಿಂಕ್ ನೋಟುಗಳನ್ನು ಹಿಂಪಡೆಯಲಾಗುವುದು ಎಂದು ಘೋಷಿಸಿತು. ಆ ಮೂಲಕ ಅಧಿಕೃತವಾಗಿ 2 ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಲಾಗಿತ್ತು.
ಸೆಪ್ಟಂಬರ್ 30ರ ಒಳಗಾಗಿ ಪಿಂಕ್ ನೋಟುಗಳ ಠೇವಣಿ ಅಥವಾ ವಿನಿಮಯ ಮಾಡಿಕೊಳ್ಳಲು ಆರ್‌ಬಿಐ ಅವಕಾಶ ನೀಡಿತ್ತು. ತದನಂತರ ಕೇವಲ 0.14 ಲಕ್ಷ ಕೋಟಿ ಮೌಲ್ಯದ 2,000 ಮುಖಬೆಲೆಯ ನೋಟುಗಳು ಮಾತ್ರ ಮಾರುಕಟ್ಟೆಯಲ್ಲಿ ಇರುವುದರಿಂದ ಮತ್ತೆ ಒಂದು ವಾರದವೆರೆಗೆ ಕಾಲಾವಕಾಶ ನೀಡಿತ್ತು. ಈ ಗಡುವು ನಾಳೆಗೆ ಮುಕ್ತಾಯವಾಗಲಿದೆ.
ಮತ್ತೆ ವಿಸ್ತರಣೆ ಸಾಧ್ಯತೆ?
2,000 ನೋಟುಗಳ ಠೇವಣಿ ಮತ್ತು ವಿನಿಮಯದ ದಿನಾಂಕವನ್ನು ಆರ್‌ಬಿಐ ಕನಿಷ್ಠ ಒಂದು ತಿಂಗಳ ಕಾಲ ವಿಸ್ತರಿಸಬಹುದು. ಏಕೆಂದರೆ ಇದು ಅನಿವಾಸಿ ಭಾರತೀಯರು ಮತ್ತು ವಿದೇಶದಲ್ಲಿ ವಾಸಿಸುವ ಇತರರನ್ನು ಪರಿಗಣಿಸುತ್ತದೆ ಎಂದು ಹಿರಿಯ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.