ಬಳ್ಳಾರಿ : ಮೂಲಭೂತ ಸೌಕರ್ಯಗಳ ವಿಚಾರವಾಗಿ ಕೇಳಿದಾಗ ವ್ಯಕ್ತಿಯೊಬ್ಬರ ಮೇಲೆ ಮುಖ್ಯಾಧಿಕಾರಿ ದೌರ್ಜನ್ಯಕ್ಕೆ ಇಳಿದ ಪ್ರಸಂಗ ಬಳ್ಳಾರಿ ಜಿಲ್ಲೆಯ ಕುಡತಿನಿ ಪಟ್ಟಣದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಕುಡುತಿನಿ ಪಟ್ಟಣದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರು ಚರಂಡಿ ವೀಕ್ಷಣೆಗೆ ತೆರಳಿದ್ದಾರೆ. ನಂತರ ಅಲ್ಲಿನ ನಿವಾಸಿಯಾದ ಗೌರಿಶಂಕರ್ ಎಂಬ ವ್ಯಕ್ತಿಯು ಇಲ್ಲಿನ ಚರಂಡಿಯಲ್ಲಿ ಘನತ್ಯಾಜ್ಯ ತುಂಬಿದ್ದು, ಚರಂಡಿ ಸ್ವಚ್ಛಗೊಳಿಸುವುದಕ್ಕೆ ಇನ್ನೆಷ್ಟು ದಿನ ಬೇಕಾಗುತ್ತದೆ ಎಂದು ಮುಖ್ಯಾಧಿಕಾರಿಗೆ ಪ್ರಶ್ನೆಸಿದ್ದಾನೆ.
ಇದಕ್ಕೆ ಪ್ರತಿಕ್ರಿಯಿಸಿ ಮುಖ್ಯಾಧಿಕಾರಿ ತೀರ್ಥಪ್ರಸಾದ್, ‘ಇನ್ನೂ ಒಂದು ತಿಂಗಳು ಆಗಲಿ, ಸ್ವಚ್ಚತೆ ಮಾಡುವುದಿಲ್ಲಲ್ಲೇ’ ಎಂದು ಏಕ ವಚನದಲ್ಲೇ ಅಸಭ್ಯವಾಗಿ ವರ್ತಿಸಿದ್ದಾರೆ. ‘ಏನು ನೀನು ನನಗೆ ಅವಾಜ್ ಹಾಕ್ತೀಯಾ ಮತ್ತು ರೌಡಿಸಂ ಮಾಡ್ತೀಯಾ?’ ಎಂದು ಅಹಂಕಾರದ ದರ್ಪವನ್ನು ವ್ಯಕ್ತಿಯ ಮೇಲೆ ತೋರಿರುವ ಗಂಭೀರ ಆರೋಪ ಕೇಳಿಬಂದಿದೆ.
ಅಧಿಕಾರಿಯಿಂದ ಅವಾಚ್ಯ ಶಬ್ದ ಬಳಕೆ
ಸಾರ್ವಜನಿಕರೊಬ್ಬರ ಮೇಲೆ ಅಭಿವೃದ್ಧಿ ವಿಚಾರವಾಗಿ ಅವಾಚ್ಯ ಶಬ್ದಗಳೊಂದಿಗೆ ಜಗಳಕ್ಕೆ ಇಳಿದಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ. ಇದರ ಬಗ್ಗೆ ಮೇಲಿನ ಅಧಿಕಾರಿಗಳು ಪರಿಶೀಲಿಸಿ, ಅಹಂಕಾರ, ದರ್ಪದಿಂದ ಮೆರೆಯುತ್ತಿರುವ ಮುಖ್ಯಾಧಿಕಾರಿ ಮೇಲೆ ಎಷ್ಟರ ಮಟ್ಟಿಗೆ ಕ್ರಮವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಜನರ ಸೇವೆ ಮಾಡುವ ಅಧಿಕಾರಿಯು ಸಾರ್ವಜನಿಕರ ಮೇಲೆ ದೌರ್ಜನ್ಯದ ದರ್ಪ ತೋರುವುದು ಎಷ್ಟರ ಮಟ್ಟಿಗೆ ಸರಿ.