ಮೈಸೂರು : ಮಹಿಷ ದಸರಾ ವಿರೋಧಿಸಿ ಚಾಮುಂಡಿ ಬೆಟ್ಟ ಚಲೋಗೆ ಸಂಸದ ಪ್ರತಾಪ್ ಸಿಂಹ ಕರೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಟಿಪ್ಪು, ಹೈದರಾಲಿ ಕಾಲ ಬಿಟ್ರೆ 414 ವರ್ಷದಿಂದ ನಿರಂತರವಾಗಿ ಮೈಸೂರು ದಸರಾ ನಡೆದುಕೊಂಡು ಬರುತ್ತಿದೆ. 2015-16ರಲ್ಲಿ ಮಹಿಷ ದಸರಾ ಎನ್ನುವ ಅಸಹ್ಯ ಹುಟ್ಟುಹಾಕಿದ್ದಾರೆ.
ಚಾಮುಂಡಿ ಬೆಟ್ಟಕ್ಕೆ ಹೋಗಿ ದೆವ್ವವನ್ನ ದೇವರು ಅಂತ, ದೇವರನ್ನ ದೆವ್ವ ಅಂತ ಹೇಳುವ ಕೆಲಸ ಆಯ್ತು. ನಂತರ ಮೆರವಣಿಗೆ ಮಾಡಲಾಯಿತು. ಆಗಿನ ಸಿದ್ದರಾಮಯ್ಯ ಸರ್ಕಾರ ಅದನ್ನ ನಿಲ್ಲಿಸಲಿಲ್ಲ ಎಂದು ಕಿಡಿಕಾರಿದ್ರು.
ಇದನ್ನೂ ಓದಿ: ಮೀಸಲಾತಿ ರೂಪಿಸಲು ಜಾತಿ ಗಣತಿ ಅನುಕೂಲ: ಗೃಹಸಚಿವ ಪರಮೇಶ್ವರ್
ಇಲ್ಲಿ ಭಕ್ತರ ಭಾವನೆಗೆ ನೋವಾಗುವ ಅಸಹ್ಯವನ್ನು ನಿಲ್ಲಿಸುವ ಮನವಿಗೆ ಸಚಿವ ಸೋಮಣ್ಣ ಸ್ಪಂದಿಸಿ ನಿಲ್ಲಿಸಲು ನಾಂದಿ ಹಾಡಿದ್ದರು. ಮಾಜಿ ಸಿಎಂಗಳಾದ B.S.ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಸರ್ಕಾರದಲ್ಲಿ ಇಂತಹ ಅಸಹ್ಯವನ್ನು ಮಟ್ಟ ಹಾಕುವ ಕೆಲಸ ಆಗಿದೆ. ಆದರೆ ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮತ್ತೆ ಮಹಿಷ ದಸರಾ ಆಚರಣೆಯ ಮಾತುಗಳನ್ನಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಇದೇ ವೇಳೆ ಚಾಮುಂಡಿ ಬೆಟ್ಟ ಚಲೋ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಪ್ರತಾಪ್ ಸಿಂಹ ನಾಗರಿಕರಿಗೆ ಕರೆ ನೀಡಿದರು. ಬಿಜೆಪಿ ಜಿಲ್ಲಾಧ್ಯಕ್ಷ, ಶಾಸಕ ಶ್ರೀವತ್ಸ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ವಿವರಣೆ ನೀಡಿದರು.