ಬೆಂಗಳೂರು : ಕಾಂಗ್ರೆಸ್ ಸರ್ಕಾರ ಆರು ತಿಂಗಳ ಬಳಿಕ ಇರಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಭವಿಷ್ಯ ನುಡಿದ ವಿಚಾರಕ್ಕೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರೆಲ್ಲ ಯಾವಾಗ ಜ್ಯೋತಿಷ್ಯ ಹೇಳಲು ಶುರು ಮಾಡಿದರೋ ಗೊತ್ತಿಲ್ಲ. ನಮ್ಮ ಸರ್ಕಾರದಲ್ಲಿ ಅಸಮಾಧಾನ ಯಾರಿಗೂ ಇಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಇದು ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಹಾಗಾಗಿ ಹೀಗೆಲ್ಲ ಮಾತನಾಡುತ್ತಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.
ಬಿಜೆಪಿಯವರೇ ವರದಿ ಒಪ್ಪಿಕೊಂಡಿದ್ರು
ಡಿಜೆ ಹಳ್ಳಿ, ಕೆಜಿ ಹಳ್ಳಿ ಗೋಲಿಬಾರ್ ಕುರಿತ ವರದಿ ಅಂಗೀಕಾರ ವಿಚಾರಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್ ಅವರು, 2022ರ ಡಿಸೆಂಬರ್ನಲ್ಲೇ ಬಿಜೆಪಿ ಸರ್ಕಾರ ಇದ್ದಾಗಲೇ ವರದಿ ಕೊಟ್ಟಿದ್ದರು. ಆ ವರದಿಯನ್ನು ಅವರೇ ಒಪ್ಪಿಕೊಂಡಿದ್ದರು. ಅವರು ಒಪ್ಪಿಕೊಂಡಿದ್ದನ್ನು ನಾವು ತಿರಸ್ಕರಿಸಲು ಆಗುತ್ತಾ? ಹಾಗಾಗಿ, ಅದರ ಗೆಜೆಟ್ ಅಧಿಸೂಚನೆ ಪ್ರಕಟಿಸಲಾಗಿದೆ ಎಂದು ಹೇಳಿದ್ದಾರೆ.
ಎರಡೂ ಕಡೆಯಿಂದಲೂ ಕಲ್ಲು ತೂರಾಟ
ಶಿವಮೊಗ್ಗ ಗಲಾಟೆ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಆತಂಕ ಪಡುವ ಅಗತ್ಯ ಇಲ್ಲ. ಘಟನೆಗೆ ಕಾರಣ ಯಾರು ಅನ್ನೋ ಬಗ್ಗೆ ತನಿಖೆ ಮಾಡ್ತಿದ್ದಾರೆ. ಲಾ ಅಂಡ್ ಆರ್ಡರ್ ವಿಭಾಗದ ಎಡಿಜಿಪಿಯನ್ನೇ ನಾವು ಅಲ್ಲಿಗೆ ಕಳಿಸಿದ್ದೆವು. ಎರಡೂ ಕಡೆಯಿಂದಲೂ ಕಲ್ಲು ಹೊಡೆದಿದ್ದಾರೆ. ಕೆಲವರ ಬಂಧನ ಆಗಿದೆ, ತನಿಖೆ ನಡೆಯುತ್ತಿದೆ. ತನಿಖೆ ಮುಗಿದ ನಂತರ ಹೆಚ್ಚಿನ ಮಾಹಿತಿ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.