ಬೆಂಗಳೂರು : ಹಿಂದೂಗಳ ಮಾರಣಹೋಮ ನಡೆಸಿದ ವ್ಯಕ್ತಿಗಳ ಪ್ರತಿಕೃತಿ ನಿರ್ಮಾಣಕ್ಕೆ ಏಕೆ ಅವಕಾಶ ನೀಡಿದ್ದು ಅಂತ ಅಲ್ಲಿನ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಉತ್ತರಿಸಬೇಕು ಎಂದು ಮಾಜಿ ಸಚಿವ ಸಿ.ಟಿ. ರವಿ ಆಗ್ರಹಿಸಿದ್ದಾರೆ.
ಶಿವಮೊಗ್ಗ ಗಲಾಟೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಶಿವಮೊಗ್ಗದಲ್ಲಿ ನಡೆದ ಕೋಮುಗಲಭೆ ದುರಾದೃಷ್ಟಕರ. ಅಮಾಯಕರನ್ನು ಗುರಿಯಾಗಿಸಿ ಗಲಭೆ ಹುಟ್ಟು ಹಾಕುವ ಉದ್ದೇಶವಾಗಿದ್ದು, ಇದು ಪೂರ್ವ ನಿಯೋಜಿತ ಕೃತ್ಯ ಎಂಬುದು ಸ್ಪಷ್ಟವಾಗುತ್ತದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ನಡೆದಿದ್ದು ಈದ್-ಮಿಲಾದ್ ಮೆರವಣಿಗೆಯೋ? ಅಥವಾ ಟಿಪ್ಪು ಜಯಂತಿ, ಔರಂಗಜೇಬ್ ಜಯಂತಿಯೋ? ಗೊತ್ತಾಗಲಿಲ್ಲ. ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನ್ ಲಕ್ಷಾಂತರ ಹಿಂದೂಗಳ ಮಾರಣಹೋಮ ನಡೆಸಿದವರು. ಶಿವಮೊಗ್ಗ ಜಿಲ್ಲಾಡಳಿತದವರು ಅವರನ್ನು ವಿಜೃಂಭಿಸಲು ಏಕೆ ಬಿಟ್ಟರು ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದು ಪಾಕಿಸ್ತಾನ ಮಾಡುವ ಸಂಚು
ಕಿಡಿಗೇಡಿಗಳು ಹಾಡಹಗಲೇ ಕೈಯಲ್ಲಿ ತಲ್ವಾರ್ ಹಿಡಿದು ಬೆದರಿಸುವ ಕೆಲಸ ಮಾಡಿದ್ದಾರೆ. ಕಲ್ಲು ತೂರಾಟ ನಡೆಸಿದ್ದಾರೆ. ಜಿಹಾದಿ ಪೋಷಣೆ ಮಾಡುವ ಬರವಣಿಗೆಗಳನ್ನು ಹಾಕಿದ್ದಾರೆ. ಈ ಎಲ್ಲಾ ಫ್ಲೆಕ್ಸ್ಗಳನ್ನು ತೆರವುಗೊಳಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕಿತ್ತು. ತೆರವು ಮಾಡದಿದ್ದ ಕಾರಣದಿಂದ ಗಲಭೆ ನಡೆದಿರುವುದು ಸ್ಪಷ್ಟವಾಗಿದೆ. ಈ ಮೂಲಕ ಮತ್ತೊಂದು ಪಾಕಿಸ್ತಾನ ಮಾಡುವ ಸಂಚು ನಡೆಯುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.