ಉಡುಪಿ : ಈದ್ ಮಿಲಾದ್ ಮೆರವಣಿಗೆ ವೇಳೆ ಶಿವಮೊಗ್ಗದಲ್ಲಿ ದುಷ್ಕರ್ಮಿಗಳು ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿರುವ ಘಟನೆ ಬಗ್ಗೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಮಾಜದ ಸ್ವಾಸ್ಥ್ಯ ಕೆಡಿಸುವ ಕಾರ್ಯಕ್ಕೆ ಯಾರೂ ಕೈ ಹಾಕಬಾರದು. ನಮ್ಮಲ್ಲಿ ನ್ಯಾಯಾಲಯಗಳಿವೆ, ಸರ್ಕಾರ ಇದೆ, ಅವುಗಳ ಮೇಲೆ ಒತ್ತಡ ಹೇರಬೇಕು ಎಂದು ಶ್ರೀಗಳು ಹೇಳಿದ್ದಾರೆ.
ಸರ್ಕಾರ ಏನು ಮಾಡುತ್ತಿದೆ?
ಕಾನೂನು ಮತ್ತು ನ್ಯಾಯ ತೀರ್ಮಾನವನ್ನು ಪ್ರಜೆಗಳು ಕೈಗೆತ್ತಿಕೊಳ್ಳಬಾರದು. ಒಂದು ಬಾರಿ ಅಶಾಂತಿ ಸೃಷ್ಟಿಯಾದರೆ ಅದಕ್ಕೆ ಕೊನೆಯಿಲ್ಲ. ಪೊಲೀಸರ ಮೇಲೆ ಹಲ್ಲೆಯಾದ್ರೆ ಸರ್ಕಾರ ಏನು ಮಾಡುತ್ತಿದೆ? ಪೊಲೀಸರ ಮೇಲೆ ಕಲ್ಲು ಎಸೆಯುತ್ತಿದ್ದಾರೆ ಅಂದ್ರೆ ಭಯ ಇಲ್ಲ ಅಂತ ಆಯ್ತು. ಕಾನೂನು ಮೀರಿದವರಿಗೆ ಶಿಕ್ಷೆ ಏನು ಅಂತ ಅರ್ಥಮಾಡಿಸಬೇಕಿದೆ. ಕಾರ್ಯಾಂಗ, ಶಾಸಕಾಂಗ ನ್ಯಾಯಾಂಗವನ್ನು ಸಮರ್ಥವಾಗಿ ಕಾರ್ಯನಿರ್ವಹಣೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಸರ್ಕಾರದ ವಿರುದ್ಧ ಬಿಜೆಪಿ ಕಿಡಿ
ಶಿವಮೊಗ್ಗ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ. ಹಿಂದೂಗಳು ಇರುವ ಹಾಗಿಲ್ಲವಾ? ಹಿಂದೂಗಳಿಗೆ ರಕ್ಷಣೆ ಕೊಡುವುದಿಲ್ಲವೇ? ಶಿವಮೊಗ್ಗದ ಮುಗ್ಧ ನಾಗರಿಕರ ಪ್ರಶ್ನೆಗಳಿಗೆ ಉತ್ತರಿಸುವ ತಾಕತ್ತು ‘ಜಾತ್ಯಾತೀತ’ ಸಿದ್ದರಾಮಯ್ಯರಿಗಿದೆಯೇ? ಎಂದು ಪ್ರಶ್ನಿಸಿದೆ.