ಬೆಂಗಳೂರು : ಕಳೆದ ಕೆಲ ದಿನಗಳಿಂದ ಸುರಿದ ಮಳೆಯಿಂದ ರಾಜ್ಯದ ಕಾವೇರಿ ಪಾತ್ರದ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ. ತಮಿಳುನಾಡಿಗೆ ನೀರು ಬಿಡಲೇಬೆಕೆಂಬ ಸಂಕಷ್ಟದಲ್ಲಿ ಸಿಲುಕಿದ್ದ ರಾಜ್ಯದ ಪಾಲಿಗೆ ಈ ಬೆಳವಣಿಗೆಯು ಸ್ವಲ್ಪ ನಿರಾಳತೆ ತಂದಿದೆ.
HD ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯದ ಒಳ ಹರಿವು 10,000 ಕ್ಯೂಸೆಕ್ ಮುಟ್ಟಿದೆ. ಎರಡು ದಿನಗಳಿಂದ ಕಬಿನಿ ಜಲಾಶಯ ವ್ಯಾಪ್ತಿಯ ಕೇರಳ ರಾಜ್ಯದ ವೈನಾಡು ಜಿಲ್ಲೆ, ಪುಳ್ಳಪಳ್ಳಿ ಮಾನಂದವಾಡಿ ತಾಲೂಕಿನಲ್ಲಿ ಸತತವಾಗಿ ಮಳೆ ಬೀಳುತ್ತಿರುವುದು ಜಲಾಶಯದ ಒಳಹರಿವು ಹೆಚ್ಚಲು ಕಾರಣ.
ಎರಡು ದಿನಗಳ ಹಿಂದೆ ಒಳಹರಿವು 800 ಕ್ಯೂಸೆಕ್‌ಗೆ ಇಳಿದಿದ್ದು, ಶನಿವಾರ 3,000 ಕ್ಯೂಸೆಕ್‌ಗೆ ಏರಿತ್ತು. ಭಾನುವಾರ 10,000 ಕ್ಯೂ ಸೆಕ್ ಏರಿದೆ. ಮಂಡ್ಯದ ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟವು ಹೆಚ್ಚು ಕಡಿಮೆ ಒಂದು ತಿಂಗಳ ನಂತರ ಹೆಚ್ಚಳವಾಗಿದೆ. ನೀರು 97 ಅಡಿಗೆ ಕುಸಿದಿತ್ತು. ಸದ್ಯ ಆ ಪ್ರಮಾಣ 98 ಅಡಿಗೆ ಹೆಚ್ಚಳವಾಗಿದೆ. ಈ ಅಂಶವು ಕೆಆರ್‌ಎಸ್ ನೀರಾವರಿ ನಿಗಮ ಬಿಡುಗಡೆ ಮಾಡಿದೆ.
ತ.ನಾಡಿಗೆ ನಿತ್ಯ 3,000 ಕ್ಯೂಸೆಸ್ ನೀರು
ಕಾವೇರಿ ನದಿ ನೀರು ವಿವಾದ ಸಂಬಂಧ ನವದೆಹಲಿಯಲ್ಲಿ ನಡೆದ ಕಾವೇರಿ ನೀರು ನಿರ್ವಾಹಣಾ ಪ್ರಾಧಿಕಾರದ ಸಭೆಯಲ್ಲಿ ದಿನಕ್ಕೆ 3,000 ಕ್ಯೂಸೆಸ್ ನಂತೆ ಮುಂದಿನ 18 ದಿನಗಳ ಕಾಲ ಕಾವೇರಿ ನೀರು ಹರಿಸುವಂತೆ ಶಿಫಾರಸು ಮಾಡಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವುದರ ವಿರುದ್ಧ ಬೆಂಗಳೂರಿನಲ್ಲಿ ಬಂದ್ ನಡೆಯುತ್ತಿರುವುದರ ಮಧ್ಯೆಯೇ ಕರ್ನಾಟಕ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ.