ಬೆಂಗಳೂರು : ನಾನು ಖಾಕಿ ಚಡ್ಡಿ ಹಾಕಿದ್ದೇನೋ ಅಥವಾ ಬೇರೆ ಹಾಕಿದ್ದೇನೋ ಜಮೀರ್ ಅವರಿಗ್ಯಾಕೆ ಎಂದು ವಕ್ಫ್ ಬೋರ್ಡ್ ಸಚಿವ ಬಿ.ಝಡ್ ಜಮೀರ್ ಅಹಮದ್ ಖಾನ್ ಅವರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್ ಬಗ್ಗೆ, ಅವರ ಹೇಳಿಕೆಗೆ ನಾನು ಯಾಕೆ ಪ್ರತಿಕ್ರಿಯಿಸಲಿ? ಕೊಚ್ಚೆ ಮೇಲೆ ಕಲ್ಲು ಹಾಕಿ ಯಾಕೆ ನನಗೆ ಕೆಸರು ಬಿಳುವ ಹಾಗೆ ಮಾಡ್ಕೋಬೇಕು? ನಾನು ಖಾಕಿ ಚಡ್ಡಿ ಹಾಕಿದ್ದೆನೋ ಅಥವಾ ಬೇರೆ ಹಾಕಿದ್ದೇನೋ ಅದೆಲ್ಲಾ ಅವರಿಗ್ಯಾಕೆ. ಅವರು ಸಚಿವರಾಗಿದ್ದಾರೆ, ಮೊದಲು ಸರ್ಕಾರದ ಕೆಲಸ ಮಾಡೋದಕ್ಕೆ ಹೇಳಿ ಎಂದು ಕುಟುಕಿದರು.
ಸಂಕ್ರಾಂತಿ ವೇಳೆಗೆ ಕಾಂಗ್ರೆಸ್ ಸರ್ಕಾರ ಪತನ ಆಗಲಿದೆ ಎಂಬ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರ ಬಳಿ ಮಾಹಿತಿ ಇರಬಹುದು, ಅದಕ್ಕೆ ಹೇಳಿರಬಹುದು. ನೀವು ಈ ಬಗ್ಗೆ ಯೋಗೇಶ್ವರ್ ಅವರನ್ನೇ ಕೇಳಿ ಎಂದು ಜಾಣ್ಮೆಯ ಉತ್ತರ ನೀಡಿದರು.
ಜಮೀರ್ ಹೇಳಿದ್ದೇನು?
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ್ರು ಜಾತ್ಯತೀತ ಅಂದ್ರೆ ನಾನು ಒಪ್ಪಿಕೊಳ್ಳುತ್ತೇನೆ. ಆದ್ರೆ, ಹೆಚ್.ಡಿ. ಕುಮಾರಸ್ವಾಮಿ ಅವರು ಜಾತ್ಯತೀತ ಅಗೋಕ್ಕೆ ಸಾಧ್ಯವೇ ಇಲ್ಲ. ಏಕೆಂದರೆ, ಅವರನ್ನು ನಾನು ಎಲ್ಲ ರೀತಿಯಿಂದ ನೋಡೀದ್ದೀನಿ. ಆದ್ರೆ, ಅವರು ಹಾಕಿರೋ ಚಡ್ಡಿ ಮಾತ್ರ ನೋಡಿಲ್ಲ. ಅವರು ಯಾವ ಚಡ್ಡಿ ಹಾಕಿದ್ದಾರೆಂದು ಈಗ ನನಗೆ ಗೊತ್ತಾಗುತ್ತಿದೆ ಎಂದು ಸಚಿವ ಜಮೀರ್ ಅಹಮ್ಮದ್ ಲೇವಡಿ ಮಾಡಿದ್ದರು. ಜಮೀರ್ ಟೀಕೆಗೆಳಿಗೆ ಕುಮಾರಸ್ವಾಮಿ ಕಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.