ಬೆಂಗಳೂರು : ಬಂಗಾಳ ಕೊಲ್ಲಿ ಹಾಗೂ ಅರಬ್ಬೀ ಸಮುದ್ರದ ದಕ್ಷಿಣ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಎರಡು ದಿನ ಭಾರಿ ಮಳೆಯಾಗಲಿದೆ.
ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉಡುಪಿ, ಉತ್ತರ ಕನ್ನಡದಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ, ಬೀದರ್, ಕಲಬುರಗಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡಗು, ಕೋಲಾರ, ತುಮಕೂರು ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? : 2,000 ನೋಟುಗಳ ವಿನಿಮಯದ ಗಡುವು ವಿಸ್ತರಣೆ
ಮುಂಗಾರು ಕಡಿಮೆ
ದೇಶದಲ್ಲಿ 4 ತಿಂಗಳ ಮುಂಗಾರು ಋತುವಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ದೀರ್ಘಾವಧಿಯ ಸರಾಸರಿ 868.6 ಮೀ.ಮೀ. ವಾಡಿಕೆ ಮಳೆಗೆ ಪ್ರತಿಯಾಗಿ 820 ಮೀ.ಮೀ. ಮಳೆ ಸುರಿದಿದೆ ಎಂದು ಐಎಂಡಿ ತಿಳಿಸಿದೆ. ಹವಾಮಾನ ಬದಲಾವಣೆ ಮುಂಗಾರಿನ ಮೇಲೆ ಗಂಭೀರ ಪರಿಣಾಮ ಬೀರಿದೆ. ಗುಡ್ಡಗಾಡು ಮತ್ತು ದ್ವೀಪ ಹೊರತುಪಡಿಸಿದ ಪ್ರದೇಶದಲ್ಲಿ ಶೇ.73 ರಷ್ಟು ಮಳೆ ಸುರಿದಿದ್ದು, ಶೇ.18ರಷ್ಟು ಮಳೆ ಕೊರತೆಯಾಗಿದೆ. ದಕ್ಷಿಣ ದ್ವೀಪದಲ್ಲೂ ಶೇ.8ರಷ್ಟು ಮಳೆ ಕೊರತೆಯಾಗಿದೆ.