ಶಿವಮೊಗ್ಗ : ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು. ಚೆನ್ನಾಗಿ ಒದೆ ತಿಂದ ಕಳ್ಳನಿಗೆ ಕೊನೆಗೆ ಬುದ್ದಿ ಬಂದಂತೆ ಕಾಣುತ್ತಿದೆ ಎಂದು ಲೇವಡಿ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕಾವೇರಿ ನೀರು ಕಳ್ಳತನದಿಂದ ಬಿಡದೇ ಇದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಕಳ್ಳತನದಿಂದ ನೀರು ಬಿಟ್ಟಿರುವುದೇ ದೊಡ್ಡ ತಪ್ಪು. ಆಗ ಇವರನ್ನು ಕಳ್ಳ ಎಂದು ಹೇಳಲಾಗಿತ್ತು. ಕಳ್ಳತನದಿಂದ ನೀರು ಬಿಟ್ಟಿದ್ದಕ್ಕೆ ಕಳ್ಳ ಎಂದರೆ ತಪ್ಪು ಇವರಿಗೆ. ಎಲ್ಲರ ಜೊತೆ ಮಾತುಕತೆ ನಡೆಸಿದ್ದರೆ ರಾಜ್ಯದ ಜನರು ಅವರ ಜೊತೆ ಇರುತ್ತಿದ್ದರು ಎಂದು ಕುಟುಕಿದ್ದಾರೆ.
ತಮಿಳುನಾಡು ಸಿಎಂ ಸ್ಟಾಲಿನ್ ಎಂಬ ಪುಣ್ಯಾತ್ಮನಿಗೆ ಒಪ್ಪಿಸಲು, I.N.D.I.A (ಇಂಡಿಯಾ) ಸಂಸ್ಥೆ ಓಲೈಸಲು ಡಿ.ಕೆ. ಶಿವಕುಮಾರ್ ನೀರು ಬಿಟ್ಟಿದ್ದಾರೆ. ಸಿದ್ಧರಾಮಯ್ಯ ಹಾಗೂ ಡಿ.ಕೆ. ಶುವಕುಮಾರ್ ರಾಜ್ಯದ ಜನರಿಗೆ ದ್ರೋಹ ಮಾಡಿದ್ದಾರೆ. ಈಗ ವಕೀಲರು, ತಜ್ಞರು ಹಾಗೂ ಹಲವರನ್ನು ಕರೆದು ಮಾತುಕತೆ ನಡೆಸಿದ್ದಾರೆ. ಮೊದಲು ಕಳ್ಳ ಎಂದೆ, ಈಗ ದಡ್ಡರು ಎನ್ನಬೇಕಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಈಗ ಸಭೆ ನಡೆಸಿ ಉಪಯೋಗವೇನು?
ನಾವು ಜನರ ಜೊತೆ ಇದ್ದೆವೆ ಎಂದು ಈಗ ಹೇಳುತ್ತಿದ್ದಾರೆ. ಇದಕ್ಕಿಂತ ಅನ್ಯಾಯ ಮತ್ತೇನಿದೆ. ರೈತರು, ವಕೀಲರು ಹಾಗೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಿಂದೆ ಮುಖ್ಯಮಂತ್ರಿಗಳು ನೀರು ಬಿಟ್ಟಿದ್ದ ಉದಾಹರಣೆ ಇದೆ. ಇವರಿಬ್ಬರು ರಾಜ್ಯದ ಜನರ ಕ್ಷಮೆ ಕೋರಬೇಕು ಅಂತ ಒತ್ತಾಯಿಸಿದ್ದಾರೆ. ತಮಿಳುನಾಡಿಗೆ ನೀರೆಲ್ಲಾ ಬಿಟ್ಟಾದ ಮೇಲೆ ಈಗ ಸಭೆ ನಡೆಸಿ ಉಪಯೋಗವೇನು? ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.