Wednesday, January 22, 2025

ವಿಶ್ವ ಹೃದಯ ದಿನ: ಹೃದಯದ ಬಗ್ಗೆ ಕಾಳಜಿ ವಹಿಸಿ

ಹೃದಯದ ಆರೋಗ್ಯದ ಕಾಳಜಿ ಕುರಿತು ವಿಶ್ವದ ಜನರಿಗೆ ಅರಿವು ಮೂಡಿಸಲು ವಿಶ್ವಮಟ್ಟದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 29ರಂದು ‘ವಿಶ್ವ ಹೃದಯ ದಿನ’ ವನ್ನು ಆಚರಿಸಲಾಗುತ್ತದೆ.

ಹೃದ್ರೋಗ ಜಾಗತಿಕ ಮಟ್ಟದಲ್ಲಿ ನಂ.1 ಮಾರಣಾಂತಿಕ ರೋಗ ಎಂಬುದರ ಬಗ್ಗೆ ಜಗತ್ತಿನಾದ್ಯಂತ ಜನರಿಗೆ ಮಾಹಿತಿ ನೀಡಲು ಮತ್ತು ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಹೃದಯ ಒಕ್ಕೂಟವು ವಿಶ್ವ ಹೃದಯ ದಿನದ ಪರಿಕಲ್ಪನೆಯನ್ನು ಸೃಷ್ಟಿಸಿದೆ.

ಹೃದಯಾಘಾತದ ಎಚ್ಚರಿಕೆ ಸಂಕೇತಗಳು : ದವಡೆಯಿಂದ ಕೆಳಭಾಗ ಮತ್ತು ಹೊಕ್ಕುಳಿನಿಂದ ಮೇಲು ಭಾಗದ ಯಾವುದೇ ಸ್ಥಳದಲ್ಲಿ ಅಸ್ವಸ್ಥತೆಯು ಹೃದಯ ರೋಗದ ಕಾರಣದಿಂದ ಉಂಟಾಗಬಹುದು ಮತ್ತು ಅದರ ಸಂಕೀರ್ಣ ಸಮಸ್ಯೆಗಳನ್ನು ತಡೆಯಲು ಎಷ್ಟು ಸಾಧ್ಯವೋ ಅಷ್ಟು ಬೇಗ ಪರಿಣಿತ ವೈದ್ಯಕೀಯ ಅಭಿಪ್ರಾಯವನ್ನು ಪಡೆಯಬೇಕು. ಹೃದಯಾಘಾತದ ಕೌಟುಂಬಿಕ ಚರಿತ್ರೆ ಇರುವವರು ಹೃದಯ ರೋಗಗಳಿಗೆ ತುತ್ತಾಗುವ ಅಪಾಯ ಇರುವುದರಿಂದ ಮತ್ತಷ್ಟು ಎಚ್ಚರಿಕೆಯಿಂದಿರಬೇಕು.

ವಿಶ್ವ ಹೃದಯ ದಿನದ ಮಹತ್ವ : ವಿಶ್ವ ಹೃದಯ ಒಕ್ಕೂಟದ ಪ್ರಕಾರ, ಅನಾರೋಗ್ಯಕರ ಆಹಾರ, ತಂಬಾಕು ಬಳಕೆ, ದೈಹಿಕ ಚಟುವಟಿಕೆಯ ಕೊರತೆ ಮತ್ತು ಆಲ್ಕೋಹಾಲ್ ಬಳಕೆಯಂತಹ ನಾಲ್ಕು ಪ್ರಮುಖ ಅಪಾಯಕಾರಿ ಅಂಶಗಳನ್ನು ನಿಯಂತ್ರಿಸುವ ಮೂಲಕ ಕನಿಷ್ಠ 80% ಅಕಾಲಿಕ ಮರಣಗಳನ್ನು (ಹೃದಯ ಸಂಬಂಧಿ ಕಾಯಿಲೆಗಳಿಂದಾಗಿ) ರಕ್ಷಿಸಬಹುದು. ವಿಶ್ವ ಹೃದಯ ದಿನದ ಅಭಿಯಾನದಲ್ಲಿ ಜನಸಾಮಾನ್ಯರೂ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಹೃದಯ ಸಂಬಂಧಿತ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರಿವು ಪಡೆಯುತ್ತಾರೆ ಹಾಗೂ ಅಕಾಲಿಕವಾಗಿ ಸಂಭವಿರುವ ಸಾವು ಎದುರಾಗದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸುತ್ತಾರೆ.

ಹೃದಯ ಕಾಳಜಿ ಅತಿ ಮುಖ್ಯ : ಮಧ್ಯ ವಯಸ್ಕರು ಸಾಮಾನ್ಯವಾಗಿ ಬೆಳಗ್ಗಿನ ಉಪಾಹಾರದ ಬದಲಿಗೆ ಜ್ಯೂಸ್ ಅಥವಾ ಕಾಫಿ ಸೇವಿಸಿ ಸುಮ್ಮನಾಗುತ್ತಾರೆ. ಆದರೆ, ಹಾಗೇ ಸರಿಯಾದ ಸಮಯಕ್ಕೆ ಸರಿಯಾದ ಪ್ರಮಾಣದ ಉಪಾಹಾರ ಸೇವಿಸದಿದ್ದರೆ ಹೃದಯ ಸಂಬಂಧಿ ರೋಗಗಳು ಬರುತ್ತವೆ. ಇದರ ನಿವಾರಣೆಗೆ ಸಮತೋಲನ ಆಹಾರ ಸೇವನೆ, ತೂಕದಲ್ಲಿ ಇಳಿಕೆ, ವ್ಯಾಯಾಮ, ಕಡಿಮೆ ಉಪ್ಪು, ಸಕ್ಕರೆ ಮತ್ತು ಕೊಬ್ಬಿನಾಂಶವಿರುವ ಆಹಾರ ಪದಾರ್ಥಗಳ ಮಿತಬಳಕೆ ಮಾಡಬೇಕು.

ಧ್ಯಾನ ಮಾಡುವುದರಿಂದ ದೇಹದ ಆಯಾಸ,‌ ಕೋಪ, ಹತಾಶೆಯನ್ನು ಕಡಿಮೆ ಮಾಡಿ, ಧ್ಯಾನ ಹೃದಯದ ಆರೋಗ್ಯವನ್ನು ವೃದ್ಧಿಸುತ್ತಿರುತ್ತದೆ. ನಿತ್ಯ 30 ನಿಮಿಷಗಳ ವ್ಯಾಯಾಮ ಮಾಡಬೇಕು. ಕಡಿಮೆ ನಿದ್ದೆ ಮಾಡುವುದು ಕೂಡಾ ಹೃದಯಕ್ಕೆ ಹಾನಿಕಾರಕ.

ಧೂಮಪಾನ, ಮದ್ಯಪಾನ, ತಂಬಾಕು ಸೇವನೆಯಿಂದ ದೂರವಿರುವುದು ಕೂಡಾ ಹೃದಯ ಆರೈಕೆಗೆ ಒಳ್ಳೆಯ ಮಾರ್ಗ. ಸದಾ ಚಟುವಟಿಕೆಯಿಂದ ಇರಿ, ಸಣ್ಣಪುಟ್ಟ ವಿಷಯಗಳನ್ನು ಗಂಭೀರವಾಗಿ ಪರಿಗಣಿಸದಿರಿ, ಆಗಾಗ್ಗೆ ವೈದ್ಯರ ಬಳಿ ಆರೋಗ್ಯ ತಪಾಸಣೆ ಮಾಡಿಸಿ.

ಇನ್ನು, ನಮ್ಮ ದೇಹವನ್ನು ಸದೃಢವಾಗಿಟ್ಟುಕೊಳ್ಳುವುದು ಸಹ ಮುಖ್ಯವಾಗುತ್ತದೆ. ಪ್ರತಿದಿನ ವ್ಯಾಯಾಮ, ಯೋಗಾಸನ ಮಾಡುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ದಿನನಿತ್ಯ ಕನಿಷ್ಠ 45 ನಿಮಿಷ ದೇಹವನ್ನು ದಂಡಿಸಿ ಅಂದರೆ ವ್ಯಾಯಾಮ ಮಾಡಿ, ನಡಿಗೆ ಮಾಡಿ. ದಿನಕ್ಕೆ 10 ಸಾವಿರ ಹೆಜ್ಜೆ ಹಾಕಿರಿ ಇದು ಆರೋಗ್ಯಕ್ಕೆ ಒಳ್ಳೆಯದು.

RELATED ARTICLES

Related Articles

TRENDING ARTICLES