ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಕಾವೇರಿ ನೀರು ಪ್ರಾಧಿಕಾರ ಎತ್ತಿಹಿಡಿದಿದ್ದು, ಈ ಸಂಬಂಧ ತೆಗೆದುಕೊಳ್ಳಬಹುದಾದ ಕಾನೂನು ಕ್ರಮಗಳ ಬಗ್ಗೆ ಚರ್ಚಿಸಲು ಇಂದು ಸರ್ವೊಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರೊಂದಿಗೆ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಕಾವೇರಿ ನದಿ ವಿಚಾರದಲ್ಲಿ ಕಾನೂನಾತ್ಮಕವಾಗಿ ರಾಜ್ಯಕ್ಕೆ ಪದೇ ಪದೇ ಹಿನ್ನಡೆಯಾಗುತ್ತಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ಕಾವೇರಿ ನೀರು ಪ್ರಾಧಿಕಾರ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ರಾಜ್ಯದ ವಾಸ್ತವಾಂಶದ ಬಗ್ಗೆ ವಿವರಿಸಿದರೂ , ರಾಜ್ಯಕ್ಕೆ ನ್ಯಾಯ ದೊರೆಯುತ್ತಿಲ್ಲ. ಇಂದಿನ ಸಭೆಯಲ್ಲಿ ಕಾನೂನು ತಜ್ಞರು , ಪರಿಣತರೊಂದಿಗೆ ಚರ್ಚಿಸಿ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಬಡವರ ಯೋಜನೆ ಬಗ್ಗೆ ಕೇಂದ್ರಕ್ಕೆ ಆಸಕ್ತಿ ಇಲ್ಲ :
ಕೇಂದ್ರಸರ್ಕಾರ , ಸಿಂಗಾಪುರ ದೇಶಕ್ಕೆ ಅಕ್ಕಿ ರಫ್ತು ಮಾಡುತ್ತಿದ್ದು, ರಾಜ್ಯಕ್ಕೆ ಅಕ್ಕಿ ನೀಡುತ್ತಿಲ್ಲ ಎಂಬುದಕ್ಕೆ ಪ್ರತಿಕ್ರಿಯಿಸಿ, ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ಅಕ್ಕಿ ದಾಸ್ತಾನಿದ್ದರೂ , ಬಡವರಿಗೆ ಅಕ್ಕಿ ನೀಡಿದೆ ಅನ್ಯಾಯ ಮಾಡಿದ್ದಾರೆ. ಮೊದಲು ಅಕ್ಕಿ ಸರಬರಾಜು ಮಾಡುವುದಾಗಿ ಒಪ್ಪಿ, ನಂತರ ನಿರಾಕರಿಸಿದ್ದಾರೆ. ಬಡವರ ಯೋಜನೆ ಸಾಕಾರಗೊಳಿಸಲು ಕೇಂದ್ರಕ್ಕೆ ಆಸಕ್ತಿ ಇಲ್ಲ ಎಂದರು.
ಪ್ರತಿಭಟನೆಗೆ ಸರ್ಕಾರದ ಆಕ್ಷೇಪವಿಲ್ಲ:
ಇಂದು ನಡೆದ ಕರ್ನಾಟಕ ಬಂದ್ ಬಗ್ಗೆ ಪ್ರತಿಕ್ರಿಯೆ ನೀಡಿ, ಪ್ರತಿಭಟನೆ ಮಾಡಲು ಸರ್ಕಾರದ ಆಕ್ಷೇಪವಿಲ್ಲ. ಆದರೆ ಸುಪ್ರೀಂ ಕೋರ್ಟ್, ಬಂದ್ ಆಚರಣೆಗೆ ಅವಕಾಶ ನೀಡಬಾರದೆಂಬ ಆದೇಶವಿದ್ದರೂ, ಬಂದ್ ಮಾಡಿದ್ದಾರೆ. ಫ್ರೀಡಂ ಪಾರ್ಕ್ ನಲ್ಲಿ ಮಾತ್ರ ಮೆರವಣಿಗೆ , ಧರಣಿ ಮಾಡಲು ಅವಕಾಶ ನೀಡಲಾಗಿದೆ ಎಂದರು.