Wednesday, January 22, 2025

ಕಾವೇರಿ ನಮ್ಮದು..! ಚಿತ್ರರಂಗದಿಂದ ಬೃಹತ್ ಪ್ರತಿಭಟನಾ ಸಭೆ

ಬೆಂಗಳೂರು : ಬೆಂಗಳೂರು ಬಂದ್​ಗೆ ಸ್ಪಂದಿಸಿದಂತೆ ಕರ್ನಾಟಕ ಬಂದ್​​ಗೂ ಇಡೀ ಕನ್ನಡ ಚಿತ್ರರಂಗ ಸಾಥ್ ನೀಡುವ ಮೂಲಕ ಕಾವೇರಿ ನಮ್ಮದು ಎಂಬ ಕೂಗಿಗೆ ಧ್ವನಿಯಾಯಿತು.

ಫಿಲ್ಮ್ ಚೇಂಬರ್ ಮುಂದಾಳತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಶಿವರಾಜ್ ಕುಮಾರ್, ದರ್ಶನ್, ಉಪೇಂದ್ರ, ಧ್ರುವ ಸರ್ಜಾ, ದುನಿಯಾ ವಿಜಿ, ಉಮಾಶ್ರೀ, ಹಂಸಲೇಖ ಅಂತಹ ದಿಗ್ಗಜರು ಭಾಗಿಯಾದರು.

  • ಕಾವೇರಿ ನಮ್ಮದು.. ಚಿತ್ರರಂಗದಿಂದ ಬೃಹತ್ ಪ್ರತಿಭಟನಾ ಸಭೆ
  • ಸ್ಯಾಂಡಲ್​ವುಡ್ ಲೀಡರ್​ಗೆ ದಚ್ಚು, ಧ್ರುವ, ಉಪ್ಪಿ, ವಿಜಿ ಸಾಥ್
  • ‘ತಾರೆಯರು ಬಂದ ಮಾತ್ರಕ್ಕೆ ಸಮಸ್ಯೆ ಬಗೆಹರಿಯಲ್ಲ’: ಶಿವಣ್ಣ
  • ಹಂಸಲೇಖ, ಉಮಾಶ್ರೀ, ಶ್ರೀನಾಥ್​ಗೆ ಕಿರಿಯ ಕಲಾವಿದರ ಸಾಥ್

ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ವಿವಾದ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಕನ್ನಡ ಚಿತ್ರರಂಗದ ತಾರೆಯರು ಬೀದಿಗಿಳಿದು ಹೋರಾಟ ಮಾಡುತ್ತಿಲ್ಲ ಎಂಬ ಆರೋಪಕ್ಕೆ ಇವತ್ತು ಉತ್ತರ ಸಿಕ್ಕಿದೆ. ಮೊನ್ನೆಯಷ್ಟೇ ನಡೆದ ಬೆಂಗಳೂರು ಬಂದ್​ಗೆ ನೈತಿಕ ಬೆಂಬಲ ಸೂಚಿಸಿ, ಶೂಟಿಂಗ್ ಮತ್ತು ಥಿಯೇಟರ್ ಕ್ಲೋಸ್ ಮಾಡಿದ್ದ ಚಿತ್ರರಂಗ, ಇಂದು ಬಹಿರಂಗವಾಗಿ ಪ್ರತಿಭಟನಾ ಸಭೆ ನಡೆಸಿತು. ಆ ಮೂಲಕ ಕಾವೇರಿ ನಮ್ಮ ಮೂಲಭೂತ ಹಕ್ಕು ಅನ್ನೋ ಧ್ವನಿ ಮತ್ತಷ್ಟು ದೊಡ್ಡದಾಗಲು ನಾಂದಿ ಹಾಡಿತು.

ಶಿವಣ್ಣ, ದಚ್ಚು ಆಗಮನದಿಂದ ಆನೆ ಬಲ

ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ. ಸುರೇಶ್ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಗೆ ಸ್ಯಾಂಡಲ್​ವುಡ್​ನ ಎಲ್ಲಾ ಅಂಗಸಂಸ್ಥೆಗಳು ಸ್ಪಂದಿಸಿದವು. ನಟ ಶಿವರಾಜ್​ಕುಮಾರ್ ಹಾಗೂ ದರ್ಶನ್ ತೂಗುದೀಪ ಅವರ ಆಗಮನದಿಂದ ಹೋರಾಟಕ್ಕೆ ಆನೆಬಲ ಬಂದಂತಾಯ್ತು. ಉಪೇಂದ್ರ, ದುನಿಯಾ ವಿಜಯ್, ಧ್ರುವ ಸರ್ಜಾ, ಹಂಸಲೇಖ, ಉಮಾಶ್ರೀ, ಶ್ರೀಮುರಳಿ, ಶ್ರೀನಾಥ್ ಸೇರಿದಂತೆ ಸಾಕಷ್ಟು ಮಂದಿ ಇವರಿಗೆ ಕೈ ಜೋಡಿಸಿದರು.

ನಾವೇ ಸೆಕ್ಯೂರಿಟಿ ಕೊಟ್ಟು ನೀರು ಹರಿಸುತ್ತಿದ್ದೇವೆ

ಸ್ಟಾರ್​ಗಳು ಬಂದು ಹೀಗೆ ಮಾತಾಡಿದ ಮಾತ್ರಕ್ಕೆ ಸಮಸ್ಯೆ ಬಗೆಹರಿಯಲ್ಲ ಎಂದ ಶಿವರಾಜ್​ಕುಮಾರ್, ತಮಿಳುನಟ ಸಿದ್ದಾರ್ಥ್​ಗೆ ನಿನ್ನೆ ನಡೆದ ಅವಮಾನಕ್ಕೆ ಬಹಿರಂಗವಾಗಿ ಕರುನಾಡಿನ ಪರ ಕ್ಷಮೆ ಯಾಚಿಸಿದರು. ನಮ್ಮದೇ ನೀರನ್ನು ನಾವೇ ಸೆಕ್ಯೂರಿಟಿ ಕೊಟ್ಟು ಅವ್ರಿಗೆ ಕಳುಹಿಸುತ್ತಿದ್ದೇವೆ. ಸಾಲದು ಅಂತ ಪ್ರೊಟೆಸ್ಟ್ ಕೂಡ ಮಾಡ್ತಿದ್ದೀವಿ ಅಂತ ನಟ ಉಪೇಂದ್ರ ಕಿಡಿಕಾರಿದರು. ಸಂಸತ್​ನಲ್ಲಿ ಮಾತ್ರ ಈ ಸಮಸ್ಯೆ ಬಗೆಹರಿಸೋಕೆ ಸಾಧ್ಯ ಎಂದು ನಾದಬ್ರಹ್ಮ ಹಂಸಲೇಖ ಹೇಳಿದರು.

ಹಿರಿಯ ನಟ ಶ್ರೀನಾಥ್, ಶ್ರುತಿ, ಪೂಜಾಗಾಂಧಿ, ಅನುಪ್ರಭಾಕರ್ ದಂಪತಿ, ಗುರುಕಿರಣ್, ವಿಜಯ್ ರಾಘವೇಂದ್ರ, ವಸಿಷ್ಠ ಸಿಂಹ, ಸೃಜನ್ ಲೋಕೇಶ್, ಶ್ರೀನಗರ ಕಿಟ್ಟಿ, ವಿನೋದ್ ಪ್ರಭಾಕರ್, ಶರಣ್ ಸೇರಿದಂತೆ ಸಾಲು ಸಾಲು ಕಲಾವಿದರು ಕಾವೇರಿ ಹೋರಾಟಕ್ಕೆ ಸಾಥ್ ನೀಡಿದರು. ಅವರಿಗೆ ಕಿರಿಯ ಕಲಾವಿದರು, ಹಿರಿಯ ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು ಸೇರಿದಂತೆ ಇಡೀ ಚಿತ್ರರಂಗ ಒಗ್ಗಟ್ಟಿನ ಮಂತ್ರ ಪಠಿಸಿತು.

ಇನ್ನೂ ನಟ ಯಶ್, ರವಿಚಂದ್ರನ್ ಹಾಗೂ ಸುದೀಪ್ ಪ್ರತಿಭಟನೆಗೆ ಗೈರಾಗಿದ್ದರು. ಸೆಕ್ಷನ್ 144 ಜಾರಿಯಲ್ಲಿದ್ದರಿಂದ ರಸ್ತೆಗಳಲ್ಲಿ ರ್ಯಾಲಿ ಮಾಡಲಿಲ್ಲವಾದ್ದರಿಂದ ಫಿಲ್ಮ್ ಚೇಂಬರ್ ಪಕ್ಕದಲ್ಲಿದ್ದ ಗುರುರಾಜ ಕಲ್ಯಾಣ ಮಂಟಪದಲ್ಲಿ ಪ್ರತಿಭಟನಾ ಸಭೆ ಯಶಸ್ವಿಯಾಗಿ, ಅರ್ಥಪೂರ್ಣವಾಗಿ ನಡೆಯಿತು.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES