Wednesday, January 22, 2025

ಜನರ ಬೆಂಬಲದಿಂದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ: ಮುಖ್ಯಮಂತ್ರಿ ಚಂದ್ರು

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಕರೆ ನೀಡಿದ್ದ ಬೆಂಗಳೂರು ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ತಿಳಿಸಿದರು.

ನಗರದ ಪ್ರೆಸ್‌ ಕ್ಲಬ್‌ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾಧ್ಯಮಗಳು ಕೂಡ ಬಂದ್ ಯಶಸ್ವಿಯಾಗಲು ಕಾರಣ ಎಂದು ಧನ್ಯವಾದ ತಿಳಿಸಿದರು. ಯಾವುದೇ ಹಾನಿಯನ್ನು ಮಾಡದೇ ಶಾಂತಿಯುತವಾಗಿ ಬಂದ್ ಆಗಿದೆ. ಜನ ಸಂಪೂರ್ಣ ಸಹಕಾರ, ಬೆಂಬಲ ಕೊಟ್ಟರು ಎಂದು ಅವರು ಹೇಳಿದರು.

ಬಂದ್ ಹಿಂದಿನ ದಿನ ಸಿಎಂ ಸಿದ್ದರಾಮಯ್ಯ ಅವರೇ ಸ್ವತಃ ನನಗೆ ಮತ್ತು ಕುರುಬೂರು ಶಾಂತಕುಮಾರ್ ಅವರಿಗೆ ಕರೆ ಮಾಡಿ, ಮೈಸೂರಿನಲ್ಲಿ ತುರ್ತು ಕಾರ್ಯಕ್ರಮ ಇರುವುದರಿಂದ ಜವಾಬ್ದಾರಿಯುತ ವ್ಯಕ್ತಿಯನ್ನು ಮನವಿ ಸ್ವೀಕರಿಸಲು ಕಳುಹಿಸುತ್ತೇನೆ. ಬಂದ ತಕ್ಷಣ ನಿಮ್ಮನ್ನು ಭೇಟಿಯಾಗುತ್ತೇನೆ ಎಂದಿದ್ದರು ಎಂದು ಅವರು ಹೇಳಿದರು.

ತಮಿಳರನ್ನು ನೋಡಿ ಕಲಿಯಬೇಕು :

ನಾನು ಮೂಲತಃ ರೈತ, ನಂತರ ಸಿನಿಮಾ ಕಲಾವಿದ, ನಾನು ಈಗ ಒಂದು ಪಕ್ಷ ಅಧ್ಯಕ್ಷನಾಗಿದ್ದರೂ, ಮೊದಲಿನಿಂದಲೂ ನಾಡು, ನುಡಿ, ನೀರಿಗಾಗಿ ಕಲಾವಿದರನ್ನು ಸೇರಿಸಿ ಹೋರಾಟ ಮಾಡಿದ್ದೇನೆ. ನಾಡಿಗೆ, ಭಾಷೆಗೆ, ನೀರಿಗೆ, ಗಡಿಗೆ ತೊಂದರೆಯಾದಾಗ ಪಕ್ಷ ಬೇಧ ಮರೆತು ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡುವುದನ್ನು ತಮಿಳು ಭಾಷಿಕರನ್ನು ನೋಡಿ ಕಲಿಯಬೇಕು ಎಂದು ಹೇಳಿದರು.

ಸುಪ್ರೀಂಕೋರ್ಟ್ ಕಾವೇರಿ ನೀರು ಹಂಚಿಕೆ ಬಗ್ಗೆ ತೀರ್ಪು ಕೊಡುವುದು ಇದ್ದಾಗ, ರಾಜ್ಯದಲ್ಲಿ ಬಂದ್ ಮಾಡಿದರೆ, ಇಲ್ಲಿನ ಸಮಸ್ಯೆ ಬಗ್ಗೆ ಅವರಿಗೂ ಸಂದೇಶ ಹೋಗಲಿದೆ. ನೀರು ಬಿಡಲು ಸೂಚನೆ ಕೊಟ್ಟರೆ ಅಶಾಂತಿ ಉಂಟಾಗಬಹುದು ಎಂದು ಚಿಂತನೆ ಮಾಡುತ್ತಾರೆ ಎನ್ನುವ ಉದ್ದೇಶದಿಂದ ತುರ್ತಾಗಿ ಬಂದ್ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಚಂದ್ರು ಸ್ಪಷ್ಟಪಡಿಸಿದರು.

ಕಾವೇರಿ ನೀರಿಗಾಗಿ ಮಾತ್ರವಲ್ಲ ರಾಜ್ಯದ ಯಾವುದೇ ಭಾಗದಲ್ಲಿ ನಾಡು, ನುಡಿ, ಗಡಿ, ರೈತರಿಗೆ ಸಮಸ್ಯೆಯಾದಾಗ ಹೋರಾಟ ಮಾಡುತ್ತೇವೆ. ಮಹದಾಯಿ, ಕೃಷ್ಣ, ತುಂಗಭದ್ರಾ ಹೋರಾಟದಲ್ಲೂ ಭಾಗವಹಿಸುತ್ತೇವೆ ಎಂದು ಅವರು ಹೇಳಿದರು.

ಜನರ ಹೋರಾಟಕ್ಕೆ ಜಯ ಸಿಕ್ಕಿದೆ :

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ತಮಿಳುನಾಡು ಸರ್ಕಾರ 12500 ಕ್ಯೂಸೆಕ್ ನೀರು ಬಿಡುವಂತೆ ಮನವಿ ಮಾಡಿದ್ದರು. ಆದರೆ, ಈ ಮನವಿಯನ್ನು ತಿರಸ್ಕರಿಸಿ ನೀರು ಬಿಡುವ ಪ್ರಮಾಣವನ್ನು 3000 ಕ್ಯೂಸೆಕ್‌ಗೆ ಇಳಿಸಲಾಗಿದೆ. ಇದಕ್ಕೆ ಬೆಂಗಳೂರು ಬಂದ್ ಮಾಡಿದ್ದು ಮತ್ತು ಬೆಂಗಳೂರು ಜನ ನೀಡಿದ ಬೆಂಬಲ ಕಾರಣ, ಬೆಂಗಳೂರು ಬಂದ್ ಯಶಸ್ವಿಯಾಗಿದೆ, ಜನರ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES