ಮೈಸೂರು : ಈಗ ಅವರದು ಬಿಜೆಪಿ ಜೊತೆಗೆ ಹೊಸ ಪ್ರೇಮ ಬೆಳೆದಿದೆ. ಅವರು ಸಮಸ್ಯೆ ಬಗೆಹರಿಸುವ ಕಾರ್ಯ ಮಾಡಲಿ. ಆದರೆ, ಸರ್ಕಾರ ಸರಿಯಾದ ನಿರ್ಧಾರ ಕೈಗೊಳ್ಳಲಿಲ್ಲ ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಿರುವುದನ್ನು ನಾವು ಒಪ್ಪುವುಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವುದನ್ನು ನಾವು ಸ್ವಾಗತಿಸುತ್ತೇವೆ ಎಂದು ತಿಳಿಸಿದರು.
ಸರ್ಕಾರ ಎಲ್ಲಾ ಹಂತದಲ್ಲೂ ನಾಡಿನ ಜನರ ರಕ್ಷಣೆಗೆ ಬದ್ಧವಾಗಿಯೇ ಇದೆ. ಕಾನೂನು ತಜ್ಞರು ಸರಿಯಾಗಿ ವಾದ ಮಾಡಿಲ್ಲ ಎಂಬ ಆರೋಪಗಳು ಸುಳ್ಳು. ಹಿಂದಿನ ಎಲ್ಲಾ ಸರ್ಕಾರಗಳು ಇದ್ದಾಗಲೂ ಇದ್ದ ಲೀಗಲ್ ಟೀಮ್ ಈಗಲೂ ಇದೆ. ಅವರೇ ವಾದ ಮಾಡಿದ್ದಾರೆ. ಕಾನೂನು ತಜ್ಞರಲ್ಲಿ ಯಾವ ಬದಲಾವಣೆ ಆಗಿಲ್ಲ. ಹೀಗಾಗಿ ಸಮರ್ಥ ವಾದ ಮಂಡಿಸಿಲ್ಲ ಎಂಬುದರಲ್ಲಿ ಅರ್ಥವಿಲ್ಲ ಎಂದು ಕುಟುಕಿದರು.
ಯಾಕೆ ಕೇಂದ್ರದ ತಂಡ ಬರ್ತಿಲ್ಲ
ಪ್ರಧಾನಿ ಮೋದಿಯವರು ಮಧ್ಯಸ್ಥಿಕೆ ವಹಿಸಬೇಕು. ಕೇಂದ್ರದಿಂದ ತಜ್ಞರ ತಂಡ ಬರಬೇಕು. ಇದನ್ನು ನಾನು ಎರಡು ಬಾರಿ ಕೇಂದ್ರಕ್ಕೆ ಕೇಳಿದ್ದೇನೆ. ದೇವೇಗೌಡ್ರು ಕೂಡ ಈಗ ಪತ್ರ ಬರೆದು ಕೇಳಿದ್ದಾರೆ. ಈಗಲಾದರೂ ಕೇಂದ್ರದಿಂದ ತಂಡ ಬರಲಿ. ಯಾಕೆ ಕೇಂದ್ರದ ತಂಡ ಬರ್ತಿಲ್ಲ ಅಂತ ಬಿಜೆಪಿಯವ್ರು ಹೇಳಲಿ. ಬಿಜೆಪಿಯವರು ಹಾದಿಬೀದಿಯಲ್ಲಿ ಹೋರಾಟ ಮಾಡುವ ಬದಲು ಕೇಂದ್ರದಿಂದ ತಜ್ಞರ ತಂಡ ಕರೆಸಲಿ. ಕೋರ್ಟ್ ಮಧ್ಯಸ್ಥಿಕೆ ಇಲ್ಲದೆ ಎರಡು ರಾಜ್ಯ ಕೂತು ಮಾತುಕತೆಗೆ ಈಗಲೂ ನಾವೂ ಸಿದ್ದವಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.