Friday, May 17, 2024

ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಕೊಡುಗೆ ಅಪಾರ: ಸಚಿವ ಕೆ.ಹೆಚ್ ಮುನಿಯಪ್ಪ

ಬೆಂಗಳೂರು ಗ್ರಾಮಾಂತರ : ಮಕ್ಕಳ ಭವಿಷ್ಯ ರೂಪಿಸುವುದು ಶಿಕ್ಷಕರ ಕೈಯಲ್ಲಿರುತ್ತದೆ, ದೇಶದ ಅಭಿವೃದ್ಧಿಗಾಗಿ ಮಕ್ಕಳು ಪುಟ್ಟ ಹೆಜ್ಜೆಯಿಂದ ದಿಟ್ಟ ಹೆಜ್ಜೆ ಇಡುವ ವರೆಗೂ ಶಿಕ್ಷಕರ ಕೊಡುಗೆ ಅಪಾರವಾದದ್ದು ಎಂದು ಅಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ದೇವನಹಳ್ಳಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ದೇವನಹಳ್ಳಿ ಟೌನ್ ನ ಅಂಬೇಡ್ಕರ್ ಭವನದಲ್ಲಿ ಭಾರತರತ್ನ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಇದನ್ನೂ ಓದಿ : ಬೆಂಗಳೂರು ಬಂದ್​ ಬೆಂಬಲಿಸಿ ಕನ್ನಡಿಗರ ಬಣದ ಕರವೇ ವತಿಯಿಂದ ಪ್ರತಿಭಟನೆ!

ಭಾರತ ರತ್ನ ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಸ್ವಾತಂತ್ರ್ಯ ಹೋರಾಟಗಾರರು, ಶಿಕ್ಷಕರು, ರಾಷ್ಟ್ರಪತಿಗಳಾಗಿ ಬಹಳಷ್ಟು ಸೇವೆ ಸಲ್ಲಿಸಿದ್ದಾರೆ. ಸಾವಿತ್ರಿ ಬಾಯಿ ಪುಲೆ ಅವರು ಭಾರತದ ಮೊದಲ ಮಹಿಳಾ ಶಿಕ್ಷಕಿ. ಹೆಣ್ಣು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ನಾಣ್ಣುಡಿಯೇ ಇದೆ. ಹೆಣ್ಣು ಮಕ್ಕಳು, ಸದೃಢರು ಸಬಲರು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ದೇಶವನ್ನು ಕಟ್ಟುವುದು ಮುಂದಿನ ಪ್ರಜೆಗಳಾದ ಮಕ್ಕಳು. ಮಕ್ಕಳಿಗೆ ಶಿಕ್ಷಕರು ಹೇಗೆ ಪಾಠ ಕಲಿಸುತ್ತೀರಿ ಅನ್ನುವುದು ಮುಖ್ಯ. ಶಾಲೆಯ ಮಕ್ಕಳನ್ನು ನಿಮ್ಮ ಮಕ್ಕಳಂತೆ ಭಾವಿಸಿ. ಬಸವಣ್ಣನವರ ಕಾಯಕವೇ ಕೈಲಾಸ ಎಂಬಂತೆ ಕರ್ತವ್ಯ ನಿಷ್ಠೆ ಇರಬೇಕು, ದೇಶದ ಭವಿಷ್ಯ ಶಿಕ್ಷಕರ ಕೈಲಿದೆ. ಮಕ್ಕಳಿಗೆ ಸಂಸ್ಕಾರ, ಜ್ಞಾನ ನೀಡಿ ವಿದ್ಯಾರ್ಥಿಗಳನ್ನು ಬೆಳೆಸಬೇಕು ಎಂದರು.

ಅಕ್ಟೋಬರ್ 02 ರ ಗಾಂಧಿ ಜಯಂತಿ ದಿನ 10 ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಮಾಡಲಾಗುವುದು. ತಾಲ್ಲೂಕಿನ ಶಾಲೆಗಳಿಗೆ ಮೊದಲ ಹಂತದಲ್ಲಿ ಕುಡಿಯುವ ನೀರು ಶೌಚಾಲಯಕ್ಕೆ ಆದ್ಯತೆ ನೀಡಿ, ಶಾಲಾ ಕಟ್ಟಡ, ಆಟದ ಮೈದಾನ, ಕಾಂಪೌಂಡ್ ನ್ನು ಹಂತ ಹಂತವಾಗಿ ನಿರ್ಮಿಸಲಾಗುವುದು ಎಂದು ಹೇಳಿದರು. ದೇವನಹಳ್ಳಿ ಯಲ್ಲಿರುವ ಗುರುಭವನಕ್ಕೆ 1000 ಆಸನ ವ್ಯವಸ್ಥೆ ಒಳಗೊಂಡ ಭವನ ನಿರ್ಮಾಣಕ್ಕೆ 10 ಲಕ್ಷ ರೂ.ಗಳನ್ನು ಶಾಸಕರ ಅನುದಾನದಲ್ಲಿ ನೀಡಲಾಗುವುದು ಎಂದು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಪದವೀಧರರ ಕ್ಷೇತ್ರ ಶಾಸಕರಾದ ಅ.ದೇವೇಗೌಡ ಅವರು ಮಾತನಾಡಿ ಮನುಷ್ಯ ನಾಗರಿಕನಾಗಬೇಕಾದರೆ ಶಿಕ್ಷಣದ ಪಾತ್ರ ಅಪಾರವಾಗಿರುತ್ತದೆ. ಶಿಕ್ಷಣ ಎಂದರೆ ವಿದ್ಯಾರ್ಥಿಯ ವ್ಯಕ್ತಿತ್ವ ರೂಪಿಸುವುದು. ಶಿಕ್ಷಣದ ಗೌರವ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ತಂದೆ ತಾಯಿಯ ನಂತರ ಮಕ್ಕಳ ಜೀವನ ರೂಪಿಸುವುದು ಶಿಕ್ಷಕರೇ ಎಂದು ಅವರು ಹೇಳಿದರು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಶಾಸಕರಾದ ಪ್ರದೀಪ್ ಈಶ್ವರ್ ಅವರು ಮಾತನಾಡಿ ಮಕ್ಕಳಿಗೆ ಪಾಠದ ಜೊತೆಗೆ , ಧೈರ್ಯ, ಆತ್ಮಸ್ಥೈರ್ಯ, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಬಲ ಬೆಳೆಸಿ. ಸಾಧನೆಗಳ ಬಗ್ಗೆ ಪ್ರೊತ್ಸಾಹದ ಮಾತುಗಳನ್ನಾಡಿ. ಶಾಲೆಯಲ್ಲಿ ಹೇಳುವ ಪಾಠವನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಪ್ರಜೆಗಳಾಗುತ್ತಾರೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚಿರುತ್ತದೆ ಎಂದು ಅವರು ಹೇಳಿದರು.

ಇದೆ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಿಗೆ ಹಾಗೂ ಉತ್ತಮ ಶಿಕ್ಷಕರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ದೇವನಹಳ್ಳಿ ತಹಶೀಲ್ದಾರ್ ಶಿವರಾಜ್, ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥ್ ಗೌಡ, ಶಾಲಾ ಸಾಕ್ಷರತಾ ಹಾಗೂ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಶ್ರೀಕಂಠ, ತಾಲೂಕು ಶಿಕ್ಷಣಾಧಿಕಾರಿ ಸುಮ, ಪುರಸಭೆ ಮುಖ್ಯಾಧಿಕಾರಿ ದೊಡ್ಡ ಮಲ್ಲಯ್ಯ, ಶಿಕ್ಷಕರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ, ಶಾಲಾ ಶಿಕ್ಷಕರು, ನಿವೃತ್ತ ಶಿಕ್ಷಕರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES