ಬೆಂಗಳೂರು : ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಲಜ್ಜೆಗೆಟ್ಟ ಆಡಳಿತ ನಡೆಸುತ್ತಿದೆ. ಹಣ ಸಂಗ್ರಹ ಮಾಡುವುದಕ್ಕಾಗಿ ಈ ಸರ್ಕಾರ ನಡೆಯುತ್ತಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳ್ಳಿಗಳಲ್ಲಿ, ಗ್ರಾಮ ಪಂಚಾಯತಿ ಮಟ್ಟದಲ್ಲಿ ಸರಾಯಿ ಅಂಗಡಿ ತೆರೆಯುತ್ತೇವೆ ಅಂತ ಹೊರಟಿದ್ದಾರೆ. ಮಾಲ್ಗಳಲ್ಲಿ ಕೂಡ ಮಾರಾಟ ಮಾಡ್ತಾರಂತೆ ಎಂದು ಕುಟುಕಿದ್ದಾರೆ.
30 ಜಿಲ್ಲೆಗಳಲ್ಲಿ ಸಾರಾಯಿ ಮಾರಾಟ ಮಾಡಿ ಹೆಚ್ಚು ಹಣ ಬರ್ತಿದೆ. ಈ ರೀತಿ ಬೇಕಾಬಿಟ್ಟಿ ಸಾರಾಯಿ ಮಾರಾಟ ಮಾಡೋದು ಸರಿಯಲ್ಲ. ಕೂಡಲೇ ಇದನ್ನೆಲ್ಲಾ ನಿಲ್ಲಿಸಬೇಕು. ಸಿಎಂ ನೇತೃತ್ವದಲ್ಲಿ ಸಭೆ ಮಾಡಿ ಈ ರೀತಿ ಸಲಹೆ ಕೊಡ್ತಾರೆ ಅಂದ್ರೆ ಅವರಿಗೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧ ಬಾಡಿಗೆ ಕೊಟ್ರೂ ಅಚ್ಚರಿ ಇಲ್ಲ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರಾಯಿ ನಿಷೇಧ ಮಾಡಬೇಕು. ಕ್ಲಬ್, ಪಬ್ ನಿಷೇಧ ಮಾಡಬೇಕು ಅಂತಿದೆ. ಆದ್ರೆ, ಈ ಸರ್ಕಾರಕ್ಕೆ ಗ್ಯಾರಂಟಿ ಅನುಷ್ಠಾನಕ್ಕೆ ಹಣ ಕಡಿಮೆ ಆಗಿದೆ ಅಂತ ಈ ರೀತಿ ನಿರ್ಧಾರ ತೆದುಕೊಂಡಿದ್ದಾರೆ. ಹೆಚ್ಚು ಹಣ ಬರುತ್ತೆ ಅಂತ ವಿಧಾನಸೌಧವನ್ನೇ ಬಾಡಿಗೆ ಕೊಟ್ರೂ ಅಚ್ಚರಿ ಇಲ್ಲ ಎಂದು ಗೋವಿಂದ ಕಾರಜೋಳ ಚಾಟಿ ಬೀಸಿದ್ದಾರೆ.