Monday, December 23, 2024

ಕಾವೇರಿ ವಿವಾದ: ಮೋದಿಗೆ ಪತ್ರ ಬರೆದ ಮಾಜಿ ಪ್ರಧಾನಿ ದೇವೇಗೌಡರ ನಡೆ ಸ್ವಾಗತಾರ್ಹ!-ಸಿಎಂ

ಬೆಂಗಳೂರು : ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನಾಡಿಗೆ ಎದುರಾಗಿರುವ ಸಂಕಷ್ಟ ನಿವಾರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸುವಂತೆ ಕೋರಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಪತ್ರ ಬರೆದಿರುವುದನ್ನು ನಾನು ಸ್ವಾಗತಿಸುತ್ತೇನೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು ಪ್ರಸ್ತುತ ಸಂದರ್ಭದಲ್ಲಿ ನಾಡಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಲು ಮೋದಿ ಅವರು ಮಧ್ಯಸ್ಥಿಕೆ ವಹಿಸಿ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸುವುದೊಂದೇ ಪರಿಣಾಮಕಾರಿ ಮತ್ತು ಈ ಸಂದರ್ಭಕ್ಕನುಗುಣವಾದ ಪರಿಹಾರವಾಗಿದೆ.

ಪ್ರಧಾನಿ ಮೋದಿ ಅವರು ಮಾಜಿ ಪ್ರಧಾನಿಗಳಾದ ದೇವೇಗೌಡರ ಮನವಿಯನ್ನು ಪುರಸ್ಕರಿಸಿ, ಕೂಡಲೇ ಮಾತುಕತೆಗೆ ಆಹ್ವಾನಿಸುತ್ತಾರೆಂದು ನಂಬಿದ್ದೇನೆ. ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಹೆಚ್.ಡಿ.ದೇವೇಗೌಡರ ಈ ನಿರ್ಧಾರದಿಂದಾದರೂ ಪ್ರೇರಣೆ ಪಡೆದು ರಾಜ್ಯ ಬಿಜೆಪಿ ನಾಯಕರು ಮತ್ತು ಆ ಪಕ್ಷದ ಸಂಸದರು ಸೇರಿ ಪ್ರಧಾನಮಂತ್ರಿ ಮಧ್ಯಪ್ರವೇಶಕ್ಕೆ ಒತ್ತಡ ಹೇರಬೇಕು. ಅತೀ ಶೀಘ್ರದಲ್ಲಿ ರಾಜ್ಯದ ಸರ್ವಪಕ್ಷಗಳ ನಾಯಕರ ನಿಯೋಗವನ್ನು ಪ್ರಧಾನ ಮಂತ್ರಿ ಭೇಟಿಮಾಡುವಂತೆ ಮಾಡಬೇಕು ಎಂದು ಅವರಲ್ಲಿ ಮನವಿ ಮಾಡುತ್ತೇನೆ.

ನೆಲ-ಜಲ-ಭಾಷೆಯ ಹಿತಾಸಕ್ತಿಯ ರಕ್ಷಣೆಯ ವಿಚಾರದಲ್ಲಿ ರಾಜ್ಯದ ರಾಜಕೀಯ ಪಕ್ಷಗಳು ತಮ್ಮ ಭಿನ್ನಮತಗಳನ್ನು ಮರೆತು ಒಟ್ಟಾಗಿ ಸಮಸ್ಯೆಯ ಪರಿಹಾರಕ್ಕಾಗಿ ಪ್ರಯತ್ನ ಪಟ್ಟಿರುವ ಇತಿಹಾಸ ಕರ್ನಾಟಕ ರಾಜ್ಯಕ್ಕೆ ಇದೆ. ಈ ಪರಂಪರೆಯನ್ನು ಜೆಡಿಎಸ್ ಪಕ್ಷದಂತೆ ಬಿಜೆಪಿ ಕೂಡಾ ಪಾಲಿಸಿಕೊಂಡು ಬರುತ್ತದೆ ಎಂದು ನಾನು ನಂಬಿದ್ದೇನೆ ಎಂದು ಟ್ವೀಟ್​ ಮಾಡಿದ್ದಾರೆ.

RELATED ARTICLES

Related Articles

TRENDING ARTICLES