ಹುಬ್ಬಳ್ಳಿ : ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಬೆಂಗಳೂರು ಬಂದ್ ಘೋಷಿಸಿರುವ ವಿಚಾರದ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನೆಲ, ಜಲ ಅನ್ಯಾಯ ಆದಾಗ ಬಂದ್ ಮಾಡೋದು ಸಹಜ. ಕರ್ನಾಟಕದಲ್ಲಿ ನೆಲ ಜಲ ಭಾಷೆ ವಿಷಯದಲ್ಲಿ ಅನ್ಯಾಯ ಆದಾಗ ಬಂದ್ ಮಾಡೋದು ಸಹಜ. ಆದರೆ, ಆಸ್ತಿ ಪಾಸ್ತಿ ನಷ್ಟ ಆಗದೆ ಇರೋ ಹಾಗೆ ಬಂದ್ ಮಾಡಿ ಎಂದು ಹೇಳಿದ್ದಾರೆ.
ಕಾವೇರಿ ವಿಚಾರದಲ್ಲಿ ನಮ್ಮ ತಪ್ಪು ಇಲ್ಲ. ಮಳೆ ಬರದೆ ಇದ್ರೆ ಅದು ನಮ್ಮ ತಪ್ಪಾ? ಅದು ಪ್ರಕೃತಿ ವಿಕೋಪ ಎಂದಿದ್ದಾರೆ. ಕಳೆದ ಬಾರಿ 600 TMC ನೀರು ಸಮುದ್ರಕ್ಕೆ ಹರಿದು ಹೋಯ್ತು. ನಮ್ಮ ಹತ್ರ ನೀರು ಇರದೆ ಇರೋದು ಸುಪ್ರೀಂ ಕೋರ್ಟ್ಗೆ ಗೊತ್ತಿಲ್ವಾ? ಕಮಿಟಿಗೆ ನೀರು ಇರೋದು ಗೊತ್ತಿಲ್ವಾ? ಮಿನಿಮಮ್ ನೀರು ಹೋಗತ್ತೆ ಎಂದು ಪ್ರಶ್ನಿಸಿದ್ದಾರೆ.
ಮೋದಿ ಯಾಕೆ ಮೌನ ವಹಿಸಿದ್ದಾರೆ
ಪ್ರಧಾನಿ ನರೇಂದ್ರ ಮೋದಿಯವರು ಕಾವೇರಿ ಜಲ ವಿವಾದ ಕುರಿತು ಯಾಕೆ ಮೌನ ವಹಿಸಿದ್ದಾರೆ. ರಾಜ್ಯದ ಸಂಸದರು ಯಾಕೆ ಮಾತನಾಡುತ್ತಿಲ್ಲ. ಕೇಂದ್ರ ಸರ್ಕಾರ ಮದ್ಯಸ್ಥಿಕೆ ವಹಿಸೋಕೆ ಬರಲ್ಲ. ಎಲ್ಲರನ್ನೂ ಕರೆದು ಪ್ರಧಾನಿ ತೀರ್ಮಾನ ಮಾಡಬೇಕು. ಅವರ ಕಡೆ ಅಧಿಕಾರ ಇದೆ ಎಂದು ರಾಮಲಿಂಗಾರೆಡ್ಡಿ ಕುಟುಕಿದ್ದಾರೆ.