ಬೆಂಗಳೂರು : ತಮಿಳುನಾಡು ರಾಜ್ಯದಲ್ಲಿ ಅಂಗಾಂಗ ದಾನ ಮಾಡಿದರೆ ಸಕಲ ಸರ್ಕಾರಿ ಗೌರವದಿಂದ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ.
ಹೌದು, ಅಂಗಾಂಗ ದಾನ ಮಾಡುವ ದಾನಿಗಳ ಗೌರವಾರ್ಥವಾಗಿ, ಸರ್ಕಾರಿ ಗೌರವದೊಂದಿಗೆ ಅವರ ಅಂತ್ಯಕ್ರಿಯೆ ನಡೆಸುವುದಾಗಿ ತಮಿಳುನಾಡು ಸರ್ಕಾರ ಘೋಷಿಸಿದೆ.
ತಮ್ಮ ಅಂಗಾಂಗಗಳನ್ನು ದಾನ ಮಾಡಿ ಅನೇಕ ಜೀವಗಳನ್ನು ಉಳಿಸಿದವರ ತ್ಯಾಗವನ್ನು ಗೌರವಿಸಲು ಆ ಅಂಗಾಂಗ ದಾನಿಗಳ ಅಂತ್ಯಕ್ರಿಯೆಯನ್ನು ಇನ್ನು ಮುಂದೆ ಸರ್ಕಾರಿ ಗೌರವದೊಂದಿಗೆ ನಡೆಸಲಾಗುವುದು ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ.
ನೂರಾರು ರೋಗಿಗಳಿಗೆ ಜೀವ
ಅಂಗಾಂಗ ದಾನದ ಮೂಲಕ ನೂರಾರು ರೋಗಿಗಳಿಗೆ ಜೀವ ನೀಡುವಲ್ಲಿ ತಮಿಳುನಾಡು ರಾಜ್ಯ ದೇಶದಲ್ಲೇ ಮುಂಚೂಣಿಯಲ್ಲಿದೆ. ಅಂಗಾಂಗ ದಾನ ಮಾಡಲು ಮುಂದೆ ಬರುವ ಕುಟುಂಬಗಳ ನಿಸ್ವಾರ್ಥ ತ್ಯಾಗದಿಂದ ಈ ಸಾಧನೆ ಸಾಧ್ಯವಾಗಿದೆ. ಮೆದುಳು ಡೆಡ್ ಆದ ಕುಟುಂಬದ ಸದಸ್ಯರ ದುರಂತ ಪರಿಸ್ಥಿತಿಯ ನಡುವೆಯೂ ಅವರು ನೀಡುವ ಅಂಗಗಳಿಂದ ಬೇರೆಯವರು ಮರುಜೀವ ಪಡೆಯುತ್ತಿದ್ದಾರೆ.
ತ್ಯಾಗ ಗೌರವಿಸಲು ಈ ನಿರ್ಧಾರ
ಹೀಗಾಗಿ, ಆ ದಾನಿಗಳನ್ನು ಗೌರವಿಸಲು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಅಂಗಾಂಗ ದಾನಿಗಳು ಮತ್ತು ಅವರ ಕುಟುಂಬದವರ ತ್ಯಾಗವನ್ನು ಗೌರವಿಸುವ ಸಲುವಾಗಿ ಸರ್ಕಾರವು ಆ ದಾನಿಗಳ ಅಂತ್ಯಕ್ರಿಯೆಗೆ ಸರ್ಕಾರಿ ಗೌರವವನ್ನು ನೀಡಲು ನಿರ್ಧರಿಸಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.