ಹಾಸನ : ದಿನೇ ದಿನೆ ಹೇಮಾವತಿಯ ಒಡಲು ಬರಿದಾಗ್ತಿದೆ. ಹಾಸನದ ಹೇಮಾವತಿ ಜಲಾಶಯ 2922 ಅಡಿ ಗರಿಷ್ಟ ನೀರಿನ ಮಟ್ಟ, ಇದೀಗ 2896 ಅಡಿಗೆ ಇಳಿಕೆಯಾಗಿದೆ.
37.103 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಕೇವಲ 18 ಟಿಎಂಸಿ ನೀರು ಮಾತ್ರ ಬಾಕಿ ಉಳಿದಿದ್ದು, ಅದರಲ್ಲಿ ಬಳಕೆಗೆ 13.678 ಟಿಎಂಸಿ ನೀರು ಮಾತ್ರ ಲಭ್ಯವಾಗಿದೆ. ಹೀಗಾಗಿ, ತೀವ್ರ ಸಂಕಷ್ಟಕ್ಕೆ ಸಿಲುಕಿರೋ ಹೇಮಾವತಿ ಅಚ್ಚುಕಟ್ಟು ಪ್ರದೇಶದ ರೈತರು, ಬಿತ್ತಿದ ಬೆಳೆಗೆ ನೀರಿಲ್ಲದೆ ಪರಿತಪಿಸುತ್ತಿದ್ದಾರೆ.
ಇನ್ನು ಈ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಟ್ಟರೆ ಮತ್ತಷ್ಟು ಸಂಕಷ್ಟ ಎದುರಾಗೊ ಸಾಧ್ಯತೆಯಿದ್ದು, ಹಾಸನ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೂ ತೊಂದರೆಯಾಗೋ ಸಾಧ್ಯತೆಯಿದೆ.
ಬರಕ್ಕೆ ಬೇಸತ್ತು ಬೆಳೆ ಕಿತ್ತು ಹಾಕಿದ ರೈತರು
ಗಣಿನಾಡು ಬಳ್ಳಾರಿಯಲ್ಲಿ ಭೀಕರ ಬರಗಾಲದ ಸೃಷ್ಟಿಯಾಗಿದ್ದು, ಬೆಳೆಗಳನ್ನ ಉಳಿಸಿಕೊಳ್ಳಲು ಅನ್ನದಾತರು ಹರಸಾಹಸ ಪಡುತ್ತಿದ್ದಾರೆ. ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆಯಿಲ್ಲದೆ ಬೆಳೆಗಳು ಸಂಪೂರ್ಣ ಒಣಗಿ ಹೋಗುತ್ತಿವೆ.
ಸದ್ಯ ಬಾನದಹಟ್ಟಿ ಗ್ರಾಮದಲ್ಲಿ ಒಣಗಿದ ಬೆಳೆಗಳನ್ನ ರೈತರು ಕಿತ್ತು ಹಾಕಿದ್ದು, ಕೂಡಲೇ ಬರ ಪರಿಹಾರ ಘೋಷಣೆ ಮಾಡುವಂತೆ ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಶಂಕರ್ ಒತ್ತಾಯಿಸಿದ್ದಾರೆ. ಜೊತೆಗೆ ರೈತರನ್ನ ಗುಳೆ ಹೋಗುವುದನ್ನು ತಪ್ಪಿಸಲು ಉದ್ಯೋಗ ಖಾತ್ರಿಯ ದಿನಗಳನ್ನ ಹೆಚ್ಚಿಸಿ, 150 ದಿನಗಳವರೆಗೆ ಮುಂದೂಡುವಂತೆ ಒತ್ತಾಯಿಸಿದ್ದಾರೆ.