ಬೆಂಗಳೂರು : ನಾನು ಹಿಂದೆ ದೇವಸ್ಥಾನಕ್ಕೆ ಹೋದಾಗ ಗೇಲಿ ಮಾಡಿದ್ರು. ಅವ್ರು ಹೋಮ ಎಲ್ಲಾ ಮಾಡಿಸಿದ್ರು, ನಾನು ಅದೆಲ್ಲಾ ಹೇಳೋಕೆ ಹೋಗಲ್ಲ. ಎಲ್ಲರಿಗೂ ಉತ್ತರ ಕೊಡೋ ಶಕ್ತಿ ನನಗೆ ಇದೆ. ಕುಮಾರಸ್ವಾಮಿ, ಬೊಮ್ಮಾಯಿಗೆಲ್ಲಾ ನಿಂತಲ್ಲೇ ಹೇಳೋಕೆ ಗೊತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕುಟುಕಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡಪರ ಸಂಘಟನೆಗಳಿಗೆ ರೋಷ ಬಂದಿದೆ, ಸ್ವಾಮೀಜಿಗಳು ಬಂದಿದ್ದಾರೆ. ನಾನು ಮೇಕೆದಾಟು ಪಾದಯಾತ್ರೆ ಮಾಡಿದಾಗ ಎಲ್ಲಿ ಹೋಗಿದ್ರು? ಬಿಜೆಪಿ ಫ್ರೆಂಡ್ಸ್ಗೆ ಅಪೀಲ್ ಮಾಡ್ತೀನಿ. ಒಳಗಡೆ ಏನೋ ಮಾತಾಡಿದ್ರು, ಹೊರಗೆ ಮೀಡಿಯಾಗಳಿಗೆ ಇನ್ನೇನೋ ಮಾತಾಡಿದ್ರು. ಇದಕ್ಕೆಲ್ಲಾ ಪರಿಹಾರ ಮೇಕೆದಾಟು ಎಂದು ಹೇಳಿದರು.
ಮಂಡ್ಯ ಬಂದ್ ನಿಂದ ಪ್ರಯೋಜನ ಆಗಲ್ಲ. ಲಾ ಅಂಡ್ ಆರ್ಡರ್ ಪ್ರಾಬ್ಲಂ ಆದ್ರೆ ಕಷ್ಟ. ಕೋರ್ಟ್ ಗಳೆಲ್ಲಾ ಇದಾವೆ. ನಾವು ರೈತರಿಗೋಸ್ಕರವೇ ಹೋರಾಟ ಮಾಡ್ತಿರೋದು, ಜನರಿಗೆ ತೊಂದರೆ ಆಗೋದು ಬೇಡ, ಪ್ರತಿಭಟನೆ ಹೋರಾಟ ಮಾಡಿಕೊಳ್ಳಲಿ. ರಾಜ್ಯಕ್ಕೂ ಧಕ್ಕೆ ಆಗ್ತದೆ, ಬಂದ್ ಕೈ ಬಿಡಿ ಅಂತ ಮನವಿ ಮಾಡ್ತೀವಿ. ಕೋಪ ಇದ್ರೆ ಏನೇನ್ ಬೇಕೋ ಬೈಯಿರಿ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಸೆ.27ರವರೆಗೆ ನೀರು ಬಿಡಬೇಕು
ಮಳೆ ನಿರೀಕ್ಷೆ ಮಾಡಿದ್ದೆವು, ಆದ್ರೆ ಆಗಿಲ್ಲ. ಮಧ್ಯದಲ್ಲಿ ರೈತರನ್ನೂ ನಾವು ಕಾಪಾಡಿದ್ದೀವಿ. ರೈತರಿಗೆ ತಿಳುವಳಿಕೆ ಕೊಡಬೇಕು ಅಂತ ಅಂದುಕೊಂಡಿದ್ದೆವು. ಕೊನೆಗೆ ಬೇಡ ಅಂತ ರೈತರ ಬೆಳೆಗಳಿಗೆ ನೀರು ಬಿಟ್ಟಿದ್ದೇವೆ. ಈಗ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೀವಿ. ನಮ್ಮ ರೈತ ಸಂಘಟನೆಗಳಿಗೂ ಅರ್ಜಿ ಹಾಕಿದ್ರು. ತಮಿಳುನಾಡು ರೈತರೂ ಹಾಕಿದ್ರು. ತಮಿಳುನಾಡು ಅಪೀಲ್ ಹಾಗೂ ನಮ್ಮ ಅಪೀಲ್ ಕೂಡ ಡಿಸ್ಮಿಸ್ ಮಾಡಿದ್ದಾರೆ. ಸೆ.27ರವರೆಗೆ ನೀರು ಬಿಡಬೇಕು ಅಂತ ಕೋರ್ಟ್ ಹೇಳಿದೆ ಎಂದು ಡಿಕೆಶಿ ತಿಳಿಸಿದರು.