Wednesday, January 22, 2025

ಸಂವಿಧಾನ ಪ್ರಸ್ತಾವನೆಯಿಂದ ‘ಜಾತ್ಯತೀತ, ಸಮಾಜವಾದ’ ಪದಕ್ಕೆ ಕೊಕ್ : ಸಿದ್ದರಾಮಯ್ಯ ಖಂಡನೆ

ಬೆಂಗಳೂರು : ಸಂವಿಧಾನ ಪ್ರಸ್ತಾವನೆಯಿಂದ ‘ಜಾತ್ಯತೀತ ಮತ್ತು ಸಮಾಜವಾದ’ ಪದಕ್ಕೆ ಕೋಕ್ ನೀಡಿರುವ ಕೇಂದ್ರದ ಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡನೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು xನಲ್ಲಿ ಪೋಸ್ಟ್​ ಮಾಡಿರುವ ಅವರು, ನೂತನ ಸಂಸತ್ ಭವನದ ಪ್ರವೇಶದ ನೆನಪಿಗಾಗಿ ಸಂಸದರಿಗೆ ಕೇಂದ್ರ ಸರ್ಕಾರ ಸಂವಿಧಾನದ ಪ್ರತಿ ನೀಡಿದೆ. ಆದರೆ, ಪ್ರಸ್ತಾವನೆಯಿಂದ ಜಾತ್ಯತೀತ ಮತ್ತು ಸಮಾಜವಾದ ಪದಗಳನ್ನು ಕಿತ್ತುಹಾಕಿರುವುದು ಬಿಜೆಪಿ ಅಂತರಂಗದಲ್ಲಿ ಸಂವಿಧಾನದ ಬಗ್ಗೆ ಇರುವ ಅಸಹನೆಗೆ ಸಾಕ್ಷಿ. ಇದು ಅತ್ಯಂತ ಖಂಡನೀಯ ಕೃತ್ಯ ಎಂದಿದ್ದಾರೆ.

ನೇರವಾಗಿ ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಧೈರ್ಯ ಬಿಜೆಪಿಗೆ ಇಲ್ಲ. ಈ ರೀತಿ ಅಡ್ಡದಾರಿ ಹಿಡಿದು ಸಂವಿಧಾನದ ಆಶಯಗಳನ್ನು ಅಳಿಸಿಹಾಕುವ ಪ್ರಯತ್ನ ನಡೆಸುತ್ತಿದೆ. ಅಂತಿಮವಾಗಿ ಸಂವಿಧಾನಕ್ಕೆ ವಿರುದ್ಧವಾಗಿ ಮನುಧರ್ಮ ಶಾಸ್ತ್ರವನ್ನು ಜಾರಿಗೊಳಿಸುವ ಗುಪ್ತ ಅಜೆಂಡಾದ ಭಾಗವಾಗಿಯೇ ಈ ಎಲ್ಲ ಕಸರತ್ತು ನಡೆಯುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಅಂಬೇಡ್ಕರ್​ಗೆ ಮಾಡಿರುವ ಅವಮಾನ

1972ರಲ್ಲಿಯೇ ಸಂವಿಧಾನಕ್ಕೆ 42ನೇ ತಿದ್ದುಪಡಿ ಮಾಡಿ ಸಮಾಜವಾದಿ ಮತ್ತು ಜಾತ್ಯತೀತ ಎಂಬ ಪದಗಳನ್ನು ಸೇರಿಸಲಾಗಿತ್ತು. ಈ ಪದಗಳನ್ನು ಕಿತ್ತುಹಾಕಿರುವುದು ಸಂವಿಧಾನ ವಿರೋಧಿ ನಡೆ ಮಾತ್ರವಲ್ಲ, ಇದೊಂದು ದೇಶದ್ರೋಹ ಕೃತ್ಯವಾಗಿದೆ. ಇದು ಅಂಬೇಡ್ಕರ್ ಅವರಿಗೆ ಮಾಡಿರುವ ಅವಮಾನವಾಗಿದೆ ಎಂದು ಕಿಡಿಕಾರಿದ್ದಾರೆ.

ಸಂವಿಧಾನದ ಮೇಲೆ ನಿರಂತರ ದಾಳಿ

ಸಂವಿಧಾನದ ಬಗ್ಗೆ ಬಿಜೆಪಿ ಮತ್ತು ಆರ್.ಎಸ್.ಎಸ್​ಗೆ ಇರುವ ವಿರೋಧಕ್ಕೆ ಇತಿಹಾಸ ಸಾಕ್ಷಿ. ಸಂವಿಧಾನವನ್ನು ದೇಶ ಒಪ್ಪಿಕೊಂಡ ಕಾಲದಲ್ಲಿಯೇ ಆರ್.ಎಸ್.ಎಸ್ ಅದನ್ನು ವಿರೋಧಿಸಿತ್ತು. ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರದ ಕಾಲದಲ್ಲಿ ಬಿಜೆಪಿ ನಾಯಕರು ಮತ್ತು ಸಂಸದರು ನಿರಂತರವಾಗಿ ಸಂವಿಧಾನದ ಮೇಲೆ ದಾಳಿ ನಡೆಸಿದ್ದಕ್ಕೆ ದೇಶ ಸಾಕ್ಷಿಯಾಗಿದೆ ಎಂದು ಕುಟುಕಿದ್ದಾರೆ.

RELATED ARTICLES

Related Articles

TRENDING ARTICLES