Monday, December 23, 2024

ರಜನಿಕಾಂತ್ ಬೆಂಗಳೂರಿಗೆ ಬರಬಾರದು : ವಾಟಾಳ್ ನಾಗರಾಜ್

ಬೆಂಗಳೂರು : ತಮಿಳು ಚಿತ್ರ ಬಂದ್ ಮಾಡ್ತೀವಿ. ರಜನಿಕಾಂತ್ ಬೆಂಗಳೂರಿಗೆ ಬರಬಾರದು. ರಜನಿಕಾಂತ್ ಏನು ನಿರ್ಧಾರ ಮಾಡ್ತೀರಾ ಮಾಡಿ. ಕಾವೇರಿ ವಿಚಾರದಲ್ಲಿ ಕರ್ನಾಟಕ ಪರ ನಿಲ್ತೀರಾ? ಇಲ್ಲ ತಮಿಳುನಾಡು ಪರ ನಿಲ್ತೀರಾ? ಎಂದು ಕನ್ನಡಪರ ಹೋರಾಟ ವಾಟಾಳ್ ನಾಗರಾಜ್ ಕಿಡಿಕಾರಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಜನತೆಗೆ ಮನವಿ ಮಾಡ್ತೀನಿ. ಒಂದು ದಿನ ಜಾಗರಣೆ ಮಾಡಿ. ಈಗಾಗಲೇ ಸ್ಟಾಲಿನ್‌ಗೆ ಹೇಳ್ತೀನಿ. ಬೆಂಗಳೂರಿನಲ್ಲಿ ತಮಿಳರು ಇದ್ದಾರೆ. ಎಷ್ಟು ದಿನದಿಂದ ಇದ್ದಾರೆ. ಅವರೆಲ್ಲ ನೀರು ಕುಡಿಯಬೇಕಾ ಬೇಡವಾ? ಹೊಸೂರು ಮೂಲಕ ಇಲ್ಲಿರೋ ತಮಿಳರನ್ನು ಕರೆಸಿಕೊಳ್ಳಿ ಎಂದರು.

ನಾನು ನೋವಿನಿಂದ ಹೇಳ್ತಿದ್ದೇನೆ. ಕರ್ನಾಟಕ ದಿಕ್ಕಿಲ್ಲದಂತೆ ಆಗಿದೆ. ಎಲ್ಲಾ ಲೋಕಸಭೆ, ರಾಜ್ಯಸಭೆ ಸದಸ್ಯರು ರಾಜೀನಾಮೆ ಕೊಡಿ. ರಾಜೀನಾಮೆ ಕೊಟ್ಟು ನಿಮ್ಮ ಧೈರ್ಯ ತೋರಿಸಿ. ಸಿದ್ದರಾಮಯ್ಯ ಏನು ನಿರ್ಧಾರ ಮಾಡ್ತಾರೆ ನೋಡೋಣ? ನಾವು ಎಲ್ಲಾ ಕನ್ನಡಪರ ಸಂಘಟನೆಗಳು ಚರ್ಚೆ ಮಾಡ್ತೀವಿ. ಹೋರಾಟಕ್ಕೆ ನಿರ್ಧಾರ ಮಾಡ್ತೀವಿ. ಸರ್ಕಾರ ಏನು ಮಾಡಲಿದೆ ಕಾದು ನೋಡೋಣ ಎಂದು ಹೇಳಿದರು.

ಗಂಟು ಮೂಟೆ ಕಟ್ಟಿ ಊರು ಬಿಡಿ

ಬೆಂಗಳೂರಿನ ಜನ ಕಲ್ಲ, ಮರಾನಾ? ನೀವು ಕಾವೇರಿ ನೀರು ಕುಡೀತಿನಿ ಅನ್ನೋ ಋಣಕ್ಕಾದ್ರೂ ಜಾಗರಣೆ ಮಾಡಿ, ಇಲ್ಲ ಉಪವಾಸ ಮಾಡಿ. ಒಂದು ದಿನ ಹೊರಗೆ ಬರಬೇಡಿ. ತಮಿಳರು, ತೆಲುಗು, ಗುಜರಾತಿ, ಮರಾಠಿಗರು ಎಲ್ಲರೂ ಜಾಗರಣೆ ಮಾಡಿ. ಇಲ್ಲ ಗಂಟು ಮೂಟೆ ಕಟ್ಟಿ ಊರು ಬಿಡಿ. ಈ ರಾಜ್ಯದಲ್ಲಿ ಹೋರಾಟ ಮಾಡೋಕೆ ಸಿದ್ದರಿಲ್ಲ ಅಂದ್ರೆ ಹೊರಡಿ. ಬೆಂಗಳೂರಿನ ಜನ ಮಾತನಾಡಬೇಕು ಎಂದು ಆಗ್ರಹಿಸಿದರು.

RELATED ARTICLES

Related Articles

TRENDING ARTICLES