ರಾಮನಗರ : ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿಚಾರ ಕುರಿತು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಪ್ರತಿಕ್ರಿಯೆ ನೀಡಿದರು.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದರ ಬಗ್ಗೆ ನನಗೆ ಗೊತ್ತಿಲ್ಲ. ನಾನು ಈಗ ಸಂವಿಧಾನಿಕ ಹುದ್ದೆಯಲ್ಲಿದ್ದೇನೆ. ಪಕ್ಷ ರಹಿತನಾಗಿ ನಾನು ಕೆಲಸ ಮಾಡುತ್ತಿದ್ದೇನೆ. ಹಾಗಾಗಿ ಪಕ್ಷಗಳು, ಮೈತ್ರಿ ಬಗ್ಗೆ ಮಾತನಾಡಲ್ಲ ಎಂದರು.
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಮಾತನಾಡಿ, ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ನಾನು ಮಾತನಾಡಲ್ಲ. ರಾಜ್ಯದ ಹಿತಾಶಕ್ತಿಗೆ, ರೈತರ ಧಕ್ಕೆ ಆಗದಂತೆ ಕಾಯಬೇಕು. ಇದಕ್ಕೆ ಇಡೀ ವಿಧಾನಸಭೆ ಒಕ್ಕೂರಲಿನಿಂದ ಒಗ್ಗಟ್ಟಾಗಬೇಕು. ಸದ್ಯ ಕಾವೇರಿ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದಾರೆ ಎನ್ನುವ ವಿಶ್ವಾಸ ಇದೆ. ಎಲ್ಲರ ಭಾವನೆಗಳನ್ನು ಸರ್ಕಾರ ಅರ್ಥ ಮಾಡಿಕೊಂಡಿದೆ.ಆಡಳಿತ ಪಕ್ಷ ಹಾಗೂ ವಿಪಕ್ಷ ಒಟ್ಟಿಗೆ ನಿಂತು ಪರಿಸ್ಥಿತಿ ಎದುರಿಸಬೇಕು ಎಂದು ಹೇಳಿದರು.
ಮಂಡ್ಯದಲ್ಲಿ ಮುಂದುವರಿದ ಹೋರಾಟ
ಮಂಡ್ಯದಲ್ಲಿ ಕಾವೇರಿ ಹೋರಾಟ ಮುಂದುವರಿದಿದೆ. ಅನ್ನದಾತರು ಹೆದ್ದಾರಿಯಲ್ಲಿ ಮಲಗಿ ಪ್ರತಿಭಟನೆ ನಡೆಸಿದ್ದಾರೆ. ಮಂಡ್ಯದ ಸಂಜಯ ವೃತ್ತದಲ್ಲಿ ಮಂಡ್ಯ ತಾಲೂಕು ರೈತ ಸಂಘದ ನೇತೃತ್ವದಲ್ಲಿ ರೈತರು ಹೆದ್ದಾರಿ ತಡೆದು, ಸುಪ್ರೀಂ ಕೋರ್ಟ್, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.