Wednesday, January 22, 2025

ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದೇ ಕುಕ್ಕರ್, ಇಸ್ತ್ರಿ ಪೆಟ್ಟಿಗೆ, ಮಿಕ್ಸಿ, ತವಾ ಹಂಚಿ : ಹೆಚ್​ಡಿಕೆ

ರಾಮನಗರ: ಜನರಿಗೆ ಆಸೆ, ಆಮಿಷ ಒಡ್ಡಿ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್ ಸರಕಾರವನ್ನು ವಜಾ ಮಾಡಬೇಕು. ಕೇಂದ್ರ ಚುನಾವಣಾ ಆಯೋಗ ಸೂಕ್ತ ರೀತಿಯಲ್ಲಿ ಕ್ರಮ ಜರುಗಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.

ಚನ್ನಪಟ್ಟಣದಲ್ಲಿ ಇಂದು ಅವರು ಮಾಧ್ಯಮಗಳ ಜತೆ ಮಾತನಾಡಿದರು. ಈ ಸರ್ಕಾರ ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬಂದಿದೆ. ಜನರಿಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರೇ ಗ್ಯಾರಂಟಿ ಕೂಪನ್ ಗಳ ಮೇಲೆ ಸಹಿ ಮಾಡಿ ಮನೆಮನೆಗೂ ಹಂಚಿಕೆ ಮಾಡಿದ್ದಾರೆ. ಈ ಕೂಪನ್ ಗಳ ಬಗ್ಗೆ ಆಯೋಗ ತನಿಖೆ ನಡೆಸಿ, ರಾಜ್ಯದ ಆ ಪಕ್ಷದ 135 ಶಾಸಕರ ಸದಸ್ಯತ್ವ ರದ್ದುಗೊಳಿಸುವ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಅವರು ಚುನಾವಣಾ ಆಯೋಗವನ್ನು ಒತ್ತಾಯ ಮಾಡಿದರು.

ಇದನ್ನೂ ಓದಿ: ಸಂಕಷ್ಟ ಸೂತ್ರವೇ ಇಲ್ಲ ಎಂದ ಮೇಲೆ ಕಾವೇರಿ ನೀರು ಬಿಟ್ಟಿದ್ದೇಕೆ: ಹೆಚ್​ಡಿಕೆ

ಕಳೆದ ವಿಧಾನಸಭೆ ಚುನಾವಣೆ ನಡೆದಿದ್ದೇ ಕುಕ್ಕರ್, ಮಿಕ್ಸಿ, ತವಾಗಳ ಮೇಲೆಯೇ. ಈ ಚುನಾವಣೆ ನಡೆಸಿದ್ದೇ ಕುಕ್ಕರ್, ಇಸ್ತ್ರಿಪೆಟ್ಟಿಗೆ, ತವಾ ಹಂಚಿಕೊಂಡು. ಅವುಗಳಿಂದಲೇ ಕಾಂಗ್ರೆಸ್ ಪಕ್ಷ ಚುನಾವಣೆಯನ್ನು ಗೆದ್ದಿದೆ. ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದರು.

ಇದಕ್ಕೆಲ್ಲ ರಾಜ್ಯದ ಜನತೆಗೆ ಮರುಳಾಗಬೇಡಿ ಅಂದಿದ್ದೆ. ನಮ್ಮ ಚನ್ನಪಟ್ಟಣದಲ್ಲಿ ನಮ್ಮ ಜನ ಇಂಥ ಆಮಿಷಗಳಿಗೆ ಮರುಳು ಆಗಲಿಲ್ಲ. ಆದರೆ, ರಾಮನಗರದಲ್ಲಿ ಅದೆಲ್ಲಾ ನಡೆಯಿತು. ಅಲ್ಲಿ ಗಿಫ್ಟ್ ಕೂಪನ್ ಗಳನ್ನು ಹಂಚಿಕೆ ಮಾಡಲಾಯಿತು. ಚುನಾವಣಾ ಆಯೋಗ ಸರಿಯಾಗಿ ತನಿಖೆ ಮಾಡಿದರೆ, ಸತ್ಯ ಹೊರಬರುತ್ತದೆ. ಈ ಸರಕಾರವನ್ನು ವಜಾ ಮಾಡಬೇಕು ಎಂದರು ಮಾಜಿ ಮುಖ್ಯಮಂತ್ರಿಗಳು.

ಈವರೆಗೂ ರಾಜ್ಯದಲ್ಲಿ ಇಂಥ ಅಕ್ರಮ ಸರಕಾರ ಬಂದಿಲ್ಲ. ಪ್ರಜಾಪ್ರಭುತ್ವದ ದಾರಿಯಲ್ಲಿ ಈ ಸರಕಾರ ಅಧಿಕಾರಕ್ಕೆ ಬಂದಿಲ್ಲ. ಚುನಾವಣಾ ಆಯೋಗ ಸರಿಯಾದ ರೀತಿ ತೀರ್ಮಾನ ಮಾಡಿದರೆ ಈ ಸರಕಾರವನ್ನು ವಜಾ ಮಾಡಬೇಕು ಎಂದ ಅವರು, ಕೇಂದ್ರ ಸರಕಾರವೂ ಗಿಫ್ಟ್ ಕೂಪನ್ ಹಂಚಿಕೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯ ಮಾಡಿದರು.

RELATED ARTICLES

Related Articles

TRENDING ARTICLES