ಕೋಲಾರ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬದುಕಿದ್ದು ಸತ್ತಂತಾಗಿದೆ. ಭೀಕರ ಬರ, ನೀರಿಗೆ ಹಾಹಾಕಾರ ಇದ್ದರೂ ಸರ್ಕಾರ ಮಾತ್ರ ಕುಂಭಕರ್ಣ ರೀತಿಯಲ್ಲಿದೆ. ನಾವು ಎಚ್ಚರಿಸಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದರು.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ಪಕ್ಷದ ಮುಖಂಡರ ಜೊತೆ ಕುರುಡುಮಲೆ ದೇವರ ದರ್ಶನ ಮಾಡಿದ್ದೇವೆ. ನರೇಂದ್ರ ಮೋದಿ ಅವರ ಹುಟ್ಟು ಹಬ್ಬ ಇವತ್ತು. ಅವರು ಮತ್ತೊಮ್ಮೆ ಪ್ರಧಾನಿ ಆಗಲಿ ಅಂತ ಪ್ರಾರ್ಥನೆ ಮಾಡ್ತೇನೆ ಎಂದರು.
ಹಬ್ಬದ ಬಳಿಕ ರಾಜ್ಯದ ಎಲ್ಲಾ ಮುಖಂಡರ ಜೊತೆ ಪ್ರತಿ ಜಿಲ್ಲೆಗೆ ಪ್ರವಾಸ ಮಾಡ್ತೇನೆ. ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸುತ್ತೇವೆ. ಜನರಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯ ತಿಳಿಸಿ ಪಕ್ಷ ಬಲಪಡಿಸುತ್ತೇವೆ. ಕಳೆದ ಬಾರಿಯಂತೆ 25ಕ್ಕೂ ಹೆಚ್ಚು ಸೀಟು ಗೆಲ್ಲಲೇಬೇಕು. ಮೋದಿಯವರಿಗೆ ನಮ್ಮದೇ ಆದ ಕೊಡುಗೆ ನೀಡಿ ಬಲಪಡಿಸಬೇಕು ಎಂದು ಹೇಳಿದರು.
ಒಂದು ಕಿ.ಮೀ ರಸ್ತೆ ಸಹ ಆಗಿಲ್ಲ
ಕಾಂಗ್ರೆಸ್ ಗ್ಯಾರೆಂಟಿ ಯೋಜನೆ ತಾತ್ಕಾಲಿಕ, ಅಭಿವೃದ್ಧಿ ಮುಖ್ಯ. ಗ್ಯಾರಂಟಿ ಯೋಜನೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ರಾಜ್ಯದಲ್ಲಿ ಒಂದು ಕಿ.ಮೀ ರಸ್ತೆ ಸಹ ಆಗಿಲ್ಲ, ಅಭಿವೃದ್ಧಿ ಸ್ಥಗಿತವಾಗಿದೆ. ಗ್ಯಾರಂಟಿ ಯೋಜನೆಗಳನ್ನು ಜನರು ಮರೆತಿದ್ದಾರೆ. ನೀರಾವರಿ, ಅಭಿವೃದ್ಧಿ ಕೆಲಸದ ಬಗ್ಗೆ ಯೋಚನೆ ಮಾಡ್ತೇವೆ ಎಂದು ಕುಟುಕಿದರು.
ಸಿಎಂಗೆ ಯಾವುದೇ ಕಳಕಳಿ ಇಲ್ಲ
ಸರ್ಕಾರ ಕಾವೇರಿ ನೀರಿನ ಬಗ್ಗೆ ಯೋಚನೆ ಮಾಡ್ತಿಲ್ಲ. ಕದ್ದುಮುಚ್ಚಿ ತಮಿಳುನಾಡಿಗೆ ನೀರು ಬಿಡಲಾಗ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಯಾವುದೇ ಕಳಕಳಿ ಇಲ್ಲದೆ ಇರೋದನ್ನು ಖಂಡಿಸುತ್ತೇನೆ. ಕನ್ನಂಬಾಡಿ ಕಟ್ಟೆ ಖಾಲಿ ಆದರೂ ನೀರು ಹರಿಸುತ್ತಿದ್ದಾರೆ. ಇದನ್ನು ಖಂಡಿಸುತ್ತೇನೆ. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಇನ್ನು ಚರ್ಚೆ ಆಗ್ತಿದೆ. ಅಂತಿಮ ರೂಪದ ಬಗ್ಗೆ ಕೇಂದ್ರದ ನಾಯಕರು ತೀರ್ಮಾನಿಸುತ್ತಾರೆ ಎಂದು ತಿಳಿಸಿದರು.