ಶಿವಮೊಗ್ಗ : ಪ್ರಧಾನಿ ನರೇಂದ್ರ ಮೋದಿ ಅವರ 73ನೇ ಹುಟ್ಟುಹಬ್ಬವನ್ನು ಆಚರಿಸಿದ್ದೇವೆ. ಸೇವಾ ಖಾರ್ಯವಾಗಿ ರಕ್ತದಾನ ಶಿಬಿರ ಆಯೋಜಿಸಿದ್ದೇವೆ. ಪ್ರಧಾನಿಯವರ ಆಶಯದಂತೆ ಕುಶಲಕರ್ಮಿಗಳಿಗೆ ಸನ್ಮಾನಿಸಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆಯ ಅಧಿವೇಶನ ವಿಶೇಷವಾಗಿರಲಿದೆ. ಅಜೆಂಡಾ ಏನಂತ ಗೊತ್ತಿಲ್ಲ. ಆದರೆ, ಮೋದಿಯವರು ಏನೇ ಮಾಡಿದರೂ ಐತಿಹಾಸಿಕವಾಗಿರಲಿದೆ ಎಂದರು.
RSS (ಆರ್.ಎಸ್.ಎಸ್) ಬಗ್ಗೆ ಲಘವಾಗಿ ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆಗೆ ರಾಘವೇಂದ್ರ ತಿರುಗೇಟು ಕೊಟ್ಟರು. ಕೆಲವು ರಾಜಕಾರಣಿಗಳು ಅವರ ಮೂಗಿನ ಮೇಲೆ ಮಾತನಾಡುತ್ತಿದ್ದಾರೆ. ರಾಷ್ಟ್ರ ಭಕ್ತ ಸಂಘಟನೆ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ. RSS ಒಂದು ದೇಶಭಕ್ತ ಸಂಘಟನೆಯಾಗಿದೆ. ಅವರ ಮಾತಿಗೆ ಯಾವುದೇ ಅರ್ಥವಿಲ್ಲ ಎಂದು ಕುಟುಕಿದರು.
ಸರ್ಕಾರ ಮೈಗೆ ಎಣ್ಣೆ ಹಚ್ಚಿಕೊಂಡಿದೆ
ಬರ ಪೀಡಿತ ತಾಲೂಕು ಘೋಷಣೆಯಾಗಿದೆ. ಇಂತಹ ಬರಗಾಲ ಹಿಂದೆಂದೂ ಬಂದಿರಲಿಲ್ಲ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಪರಿಗಣಿಸಲಿ. ಇಷ್ಟು ದಿನ 100 ದಿನ ಆಚರಣೆ, ಗ್ಯಾರಂಟಿ ಕಾರ್ಯಕ್ರಮ ಆಯೋಜನೆ, ಸಚಿವರ ಕಾರು ಬದಲಾವಣೆಗೆ ಹಣ ಇದೆ. ಆದರೆ, ರಾಜ್ಯ ಸರ್ಕಾರ ಮೈಗೆ ಎಣ್ಣೆ ಹಚ್ಚಿಕೊಂಡು ಕೇಂದ್ರಕ್ಕೆ ಬೊಟ್ಟು ಮಾಡುತ್ತಿದೆ. ರಾಜಕೀಯ ಮಾಡುವುದನ್ನು ರಾಜ್ಯ ಸರ್ಕಾರ ಬಿಡಲಿ. ತಕ್ಷಣ ಬೆಳೆ ವಿಮೆ ಹಣ ಬಿಡುಗಡೆ ಮಾಡಲಿ. ರೈತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮವಾಗಲಿ ಎಂದು ಚಾಟಿ ಬೀಸಿದರು.