ಬೆಂಗಳೂರು : ರಾಜ್ಯದಲ್ಲಿ ಇರುವುದು ತಾಲಿಬಾನ್ ಸರ್ಕಾರ ಎಂದು ಕಾಂಗ್ರೆಸ್ ಅನ್ನು ಲೇವಡಿ ಮಾಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಯತ್ನಾಳ್ ಅವರ ಮಾತಿಗೆ ಕಿಮ್ಮತ್ತಿಲ್ಲ. ಅಂಥವರ ಮಾತಿಗೆ ಪ್ರತ್ಯುತ್ತರ ಕೊಡೋದ್ರಲ್ಲಿ ಅರ್ಥವಿಲ್ಲ. ಅವರು ತಾಲಿಬಾನ್ ಜನರು. ತಾಲಿಬಾನ್ನ ಮೂಲ ಪುರುಷರು ಅವರು ಎಂದು ಕುಟುಕಿದರು.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಜನ ನಾವು ಕಾಂಗ್ರೆಸ್ನವರು. ದೇಶವನ್ನು ಕಟ್ಟಿದ ಜನ ಕಾಂಗ್ರೆಸ್ನವರು. ಶಾಸಕ ಯತ್ನಾಳ್ ಅವರ ಪೂರ್ವಜರು ಕೂಡ ಸ್ವಾತಂತ್ರ್ಯದಲ್ಲಿ ಹೋರಾಡಲೂ ಇಲ್ಲ, ದೇಶವನ್ನು ಕಟ್ಟಲಿಲ್ಲ. ಅವರ ಪಕ್ಷದವರು 120 ಲಕ್ಷ ಕೋಟಿ ಸಾಲ ಮಾಡಿದ್ದೇ ದೊಡ್ಡ ಸಾಧನೆ ಎಂದು ವಾಗ್ದಾಳಿ ನಡೆಸಿದರು.
ಸಚಿವಸ್ಥಾನದಲ್ಲೇ ತೃಪ್ತಿ
ಮೂರು ಡಿಸಿಎಂ ಸ್ಥಾನ ಸೃಷ್ಟಿ ಬಗ್ಗೆ ಹೈಕಮಾಂಡ್ ನಾಯಕರು ತೀರ್ಮಾನ ಮಾಡ್ತಾರೆ. ಗ್ಯಾರಂಟಿಗಳನ್ನು ರಾಜ್ಯದ ಜನರಿಗೆ ತಲುಪಿಸಬೇಕು. ಲೋಕಸಭಾ ಚುನಾವಣೆಗೆ ನಾವು ತಯಾರಾಗಬೇಕಿದೆ. ನನಗಂತೂ ಡಿಸಿಎಂ ಹುದ್ದೆ ಬೇಡ. ಸಚಿವಸ್ಥಾನದಲ್ಲೇ ನಾನು ತೃಪ್ತಿಯಾಗಿದ್ದೇನೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.