Wednesday, January 22, 2025

ರೈತರ ಸಾವುಗಳೆಂದರೆ ಇವರಿಗೆ ಇಷ್ಟು ಹಗುರವೇ? : ಹೆಚ್​.ಡಿ. ಕುಮಾರಸ್ವಾಮಿ

ಬೆಂಗಳೂರು : ಸಾವಿನಲ್ಲೂ ಅರ್ಹತೆ, ಅನರ್ಹತೆ ಹುಡುಕುವ ಈ ಕ್ರೂರತೆಗೆ ಏನೆಂದು ಹೇಳುವುದು? ರೈತರ ಸಾವುಗಳೆಂದರೆ ಇವರಿಗೆ ಇಷ್ಟು ಹಗುರವೇ? ಎಂದು ಕಾಂಗ್ರೆಸ್​ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಆರು ತಿಂಗಳಲ್ಲಿ 251 ಅನ್ನದಾತರು ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಬೆಳೆ ವಿಮೆಯೂ ಅನ್ನದಾತರ ಆಪತ್ತಿಗೆ ಆಗುತ್ತಿಲ್ಲ, ಅದರ ಬಗ್ಗೆ ಅವರಿಗೆ ವಿಶ್ವಾಸವೇ ಇಲ್ಲ. ಅವರು ಸಾವಿನ ದವಡೆಗೆ ಬೀಳುತ್ತಿದ್ದರೆ ಅಧಿಕಾರಿಗಳು ಅರ್ಹ? ಅನರ್ಹ ಸಾವು?ಎಂದು ವಿಭಜಿಸಿ ಲೆಕ್ಕ ಹಾಕಿಕೊಂಡು ಕೂತಿದ್ದಾರೆ ಎಂದು ಬೇಸರಿಸಿದ್ದಾರೆ.

ಬೆಳ್ಳಂ ಬೆಳಗ್ಗೆಯೇ 251 ರೈತರು ಆತ್ಮಹತ್ಯೆಗೆ ಶರಣಾದ ಸುದ್ದಿ ಓದಿದಾಕ್ಷಣ ಬಹಳ ಸಂಕಟವಾಯಿತು, ಕಣ್ಣಾಲಿಗಳು ತುಂಬಿ ಬಂದವು. ಇನ್ನೆಷ್ಟು ದಿನ ಇಂತಹ ಸಾವುಗಳನ್ನು ನೋಡಬೇಕು. ಕೇವಲ ಪ್ರಚಾರ, ಅಧಿಕಾರದ ಸುಖ ಅನುಭವಿಸುತ್ತಿರುವ ಕಾಂಗ್ರೆಸ್​ ಸರ್ಕಾರಕ್ಕೆ ಅನ್ನದಾತನ ಸಾವಿನ ಕೇಕೆ ಸವಿಗಾನವಾಗಿದೆಯಾ? ಇವರಿಗೆ ವಾಸ್ತವ ಅರಿವಿಲ್ಲವೆ? ಎಂದು ಪ್ರಶ್ನಿಸಿದ್ದಾರೆ.

ಕೃಷಿ ಇಲಾಖೆನಾ, ಕಸಾಯಿಖಾನೆನಾ?

ಗ್ಯಾರಂಟಿಗಳನ್ನು ಕೊಟ್ಟೆವೆಂದು ಬೀಗುತ್ತಿರುವ ಈ​ ಸರ್ಕಾರಕ್ಕೆ ರೈತನ ಬದುಕಿಗೆ ಗ್ಯಾರಂಟಿ ಕೊಡಲು ಸಾಧ್ಯವಿಲ್ಲವೇ? ಇದೇನಾ ‘ಕರ್ನಾಟಕ ಮಾದರಿ’? ರಾಜ್ಯದಲ್ಲಿ ಕೃಷಿ ಇಲಾಖೆ ಎನ್ನುವುದು ಇದೆಯಾ? ಅದು ಕೃಷಿ ಇಲಾಖೆಯಾ, ಕಸಾಯಿಖಾನೆಯಾ? ಕಂದಾಯಕ್ಕೂ ಆದಾಯದ ಚಿಂತೆಯಾ? ರಾಜ್ಯಕ್ಕೆ ಬರ, ಕೆಲವರಿಗೆ ಅದೇ ವರ. ಇದು ನೈಜಸ್ಥಿತಿ ಎಂದು ಕುಟುಕಿದ್ದಾರೆ.

ರೈತರೇ.. ನಿಮ್ಮೊಂದಿಗೆ ನಾನಿದ್ದೇನೆ

ನನ್ನ ಮನವಿ ಇಷ್ಟೇ.. ‘ರೈತರು ಎದೆಗುಂದಬಾರದು. ನಿಮ್ಮ ದುಡುಕಿನ ನಿರ್ಧಾರ ನಿಮ್ಮ ಕುಟುಂಬವನ್ನು ಅನಾಥಗೊಳಿಸುತ್ತದೆ, ನಿಮ್ಮೊಂದಿಗೆ ನಾನಿದ್ದೇನೆ. ಸರ್ಕಾರ ಇಂಥ ಆತ್ಮಹತ್ಯೆ ಪ್ರಕರಣಗಳಿಗೆ ಇತಿಶ್ರೀ ಹಾಡಲೇಬೇಕು. ಶಾಶ್ವತವಾಗಿ ಪರಿಹಾರೋಪಾಯ ಕಂಡುಕೊಳ್ಳಬೇಕು. ಜೀವಬಿಟ್ಟ ರೈತ ಕುಟುಂಬಗಳಿಗೆ ಮಾನವೀಯತೆಯ ನೆರವು ಕೊಡಬೇಕು. ವಿಳಂಬ ಸರಿಯಲ್ಲ’ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES