ಶಿವಮೊಗ್ಗ : ಯಾಕಾದರೂ ಈ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತಂದಿದ್ದೇವೆ ಎಂದು ರಾಜ್ಯದ ಜನರು ಇವರಿಗೆ ಶಾಪ ಹಾಕುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಬಹಳ ದಿನವಾಗಿಲ್ಲ. ಈಗಲೇ ಜನರು ಈ ಸರ್ಕಾರದ ವಿರುದ್ಧ ಬೇಸತ್ತಿದ್ದಾರೆ ಎಂದು ಕುಟುಕಿದರು.
ರಾಜ್ಯದಲ್ಲಿ ಬರ ಘೋಷಣೆ ವಿಚಾರವಾಗಿ ಮಾತನಾಡಿ, ಕೂಡಲೇ ಎನ್.ಡಿ.ಆರ್.ಎಫ್. ನಿಯಮದಂತೆ ಪರಿಹಾರ ನೀಡಲಿ. 194 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ರೈತರು ಸಂಕಷ್ಟದಲ್ಲಿ ಇದ್ದಾರೆ. ಗ್ಯಾರಂಟಿಗಳ ಭರಾಟೆಯಲ್ಲಿ ರೈತರ ಸಂಕಷ್ಟಕ್ಕೆ ಹೇಗೆ ಸ್ಪಂಧಿಸುತ್ತಾರೆ ಎನ್ನುವುದು ಪ್ರಶ್ನೆಯಾಗಿದೆ ಎಂದು ಚಾಟಿ ಬೀಸಿದರು.
BSY ಕೇಂದ್ರವನ್ನ ಕೇಳಿದ್ರಾ
ಕೇವಲ ಬರ ಪೀಡಿತ ಪ್ರದೇಶಗಳ ಪಟ್ಟಿ ಕೇಂದ್ರಕ್ಕೆ ಕಳಿಸಿದರೆ ಸಾಕಾಗುವುದಿಲ್ಲ. ನಿಮ್ಮ ಕರ್ತವ್ಯ ಏನು ಹಾಗಾದ್ರೆ? ನಿಮ್ಮ ಕರ್ತವ್ಯದಿಂದ ಓಡಿ ಹೋಗುವ ಕೆಲಸ ನೀವು ಮಾಡಿದ್ದೀರಿ. ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಅತಿವೃಷ್ಟಿ ಉಂಟಾಗಿತ್ತು. ಆಗ ಕೇಂದ್ರದ ಸಹಕಾರಕ್ಕೆ ಕಾಯದೇ ಮನೆ ಬಿದ್ದವರಿಗೆ ತಕ್ಷಣವೇ ಪರಿಹಾರ ಘೋಷಿಸಿದ್ದರು. ಆದರೆ, ಈ ಸರ್ಕಾರ ಮಾಡುತ್ತಿರುವುದು ಏನು? ಎಂದು ಪ್ರಶ್ನಿಸಿದರು.
ಪಕ್ಷ ಕೊಟ್ರೆ ನಾನು ಸಿದ್ಧ
ವಿಜಯೇಂದ್ರ ರಾಜ್ಯಾಧ್ಯಕ್ಷರಾಗಲಿ ಎಂಬ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಶಾಸಕನಾಗಿ ಮೊದಲ ಬಾರಿ ಆಯ್ಕೆಯಾಗಿದ್ದೇನೆ. ಸದ್ಯಕ್ಕೆ ಶಾಸಕನಾಗಿ ನನ್ನ ಜವಬ್ದಾರಿ ನಾನು ನಿರ್ವಹಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷ ಹಾಗೂ ಪಕ್ಷದ ನಾಯಕರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಜಾಣ್ಮೆಯ ಉತ್ತರ ನೀಡಿದರು.