ಬೆಂಗಳೂರು : ಮೈತ್ರಿ ಬಗ್ಗೆ ಯಾವುದೇ ಸಿಹಿ ಸುದ್ದಿ ಇಲ್ಲದೇ ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್ ಯಡಿಯೂರಪ್ಪ ದೆಹಲಿಯಿಂದ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.
ದೆಹಲಿ ಭೇಟಿ ಬಳಿಕ ಬೆಂಗಳೂರಿನಲ್ಲಿ ಮಾತನಾಡಿದ ಅವರು, ದೆಹಲಿ ಸಭೆಯಲ್ಲಿ ರಾಜ್ಯ ರಾಜಕೀಯದ ಬಗ್ಗೆಯಾಗಲಿ, ಮೈತ್ರಿ ಬಗ್ಗೆ ಏನೂ ಚರ್ಚೆ ಆಗಲಿಲ್ಲ. ಅವರಾಗಿ ಏನು ಪ್ರಸ್ತಾಪ ಮಾಡಲಿಲ್ಲ. ನಾನಾಗಿ ಏನು ಕೇಳಲಿಲ್ಲ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ಮನಸ್ಸಲ್ಲಿ ಏನಿದೆಯೋ ಗೊತ್ತಿಲ್ಲ. ಎಲ್ಲವನ್ನೂ ಅವರೇ ತೀರ್ಮಾನ ಮಾಡ್ತಾರೆ ಎಂದಿದ್ದಾರೆ. ನಿಮ್ಮ ಮತ್ತು ರಾಜ್ಯ ನಾಯಕರ ಸಹಮತ ಇದೆಯೇ? ಎಂಬ ಪ್ರಶ್ನೆಗೆ, ಪ್ರಶ್ನೆಯೇ ಇಲ್ಲ.. ಕೇಂದ್ರ ನಾಯಕರು ಮಾಡುವ ತೀರ್ಮಾನಕ್ಕೆ ಸಹಮತ ಇರುತ್ತದೆ. ರಾಜ್ಯ ನಾಯಕರ ಮನಸ್ಸಲ್ಲಿ ಏನಿದೆ ಗೊತ್ತಿಲ್ಲ. ನಾನು ವಯಕ್ತಿಕ ತೀರ್ಮಾನ ಮಾಡುವುದಕ್ಕೆ ಆಗಲ್ಲ ಎಂದು ತಿಳಿಸಿದ್ದಾರೆ.
ನೀರು ಬಿಟ್ಟಿದ್ದು ಅಕ್ಷಮ್ಯ ಅಪರಾಧ
ಕಾವೇರಿ ನೀರು ಒಂದು ತೊಟ್ಟು ಬಿಡಬಾರದು. ನೀರು ಬಿಟ್ಟು ಸರ್ಕಾರ ಅಕ್ಷಮ್ಯ ಅಪರಾಧ ಮಾಡಿದೆ. ಕೂಡಲೇ ನೀರು ಹರಿಸುತ್ತಿರುವುನ್ನು ನಿಲ್ಲಿಸಬೇಕು. ಕೋರ್ಟ್ ಕಾವೇರಿ ಕಣಿವೆಯ ವಾಸ್ತವ ಪರಿಸ್ಥಿತಿ ವಿವರಿಸಬೇಕು. ರಾಜ್ಯದಲ್ಲಿ 195 ತಾಲ್ಲೂಕುಗಳಲ್ಲಿ ಭೀಕರ ಬರಗಾಲ ಇದೆ. ಸರ್ಕಾರದ ಆದೇಶ ನೋಡಿದೆ, ಕೂಡಲೇ ಬರ ಎದುರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರು ಇನ್ನಿತರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದ್ದಾರೆ.