ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ ಪ್ರತಿಷ್ಠೆ ಬಿಡಬೇಕು. ಮುಖ್ಯಮಂತ್ರಿಗಳ ಪತ್ರಕ್ಕೆ ಇನ್ನು ಕೇಂದ್ರದಿಂದ ಪ್ರತಿಕ್ರಿಯೆ ಬಂದಿಲ್ಲ. ಕೇಂದ್ರ ಸರ್ಕಾರ ಕರ್ನಾಟಕದ ಸಮಸ್ಯೆ ಕುರಿತು ಚರ್ಚೆ ಮಾಡೋಕೆ ಅವಕಾಶ ಕೊಡಬೇಕು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಕುಟುಕಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗಾಲ ವಿಚಾರದಲ್ಲಿ ನಮಗೆ ಯಾವ ಕನ್ಫ್ಯೂಸನ್ ಇಲ್ಲ, ರೈತರನ್ನು ಕನ್ಫ್ಯೂಸ್ ಮಾಡಿದ್ದು ಕೇಂದ್ರ ಸರ್ಕಾರ ಎಂದು ಮೋದಿಯತ್ತ ಬೊಟ್ಟು ಮಾಡಿದರು.
ನಾವು ನಿನ್ನೆ ಬರಗಾಲ ಘೋಷಣೆ ಮಾಡಿದ್ದೇವೆ. 195 ತಾಲೂಕು ಬರಗಾಲ ಎಂದು ಘೋಷಣೆ ಮಾಡಿದ್ದೇವೆ. ಇದಕ್ಕೆ ಒಂದುವರೆ ತಿಂಗಳಿಂದ ಕೆಲಸ ಮಾಡಿ ಬರಗಾಲ ಘೋಷಣೆ ಮಾಡಿದ್ದೇವೆ. ಕೇಂದ್ರ ಸರ್ಕಾರದ ಮಾನದಂಡಗಳಿಕೆ ಕೆಲ ತಾಲೂಕುಗಳು ಬರ್ತಿಲ್ಲ. ನಮಗೆ ಸರಿ ಮಾಡೋಕೆ ಯಾವ ಪ್ರತಿಷ್ಠೆ ಇಲ್ಲ. ಕೇಂದ್ರ ಸರ್ಕಾರದ ನಾರ್ಮ್ಸ್ ಪ್ರಕಾರ ನಾವು ಮಾಡಿದ್ದೇವೆ ಎಂದು ತಿಳಿಸಿದರು.
ಇದೇ ಅಂತಿಮ ಅಲ್ಲ, ಮತ್ತೆ ಸಮೀಕ್ಷೆ
ಇದೇ ಅಂತಿಮ ಅಲ್ಲ, ತಿಂಗಳ ಕೊನೆಯಲ್ಲಿ ಮತ್ತೊಮ್ಮೆ ಸಮೀಕ್ಷೆ ಮಾಡಲಾಗುವುದು. ಜುಲೈ 1ನೇ ವಾರದಲ್ಲಿ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ರು. ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ಬರಗಾಲ ಘೋಷಣೆ ಮಾಡೋದು ಕಷ್ಟ. ಅಂತಹ ಸವಾಲಿನ ಮಧ್ಯೆಯೂ ನಾವು ಘೋಷಣೆ ಮಾಡಿದ್ದೇವೆ. ಕೇಂದ್ರ ಸರ್ಕಾರ ಮಾರ್ಗಸೂಚಿ ಬದಲಾವಣೆ ಮಾಡಬೇಕು. ಈ ತಿಂಗಳ ಕೊನೆಯಲ್ಲಿ ಬರಗಾಲದ ಮಾನದಂಡ ಪರಿಶೀಲನೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.