ಮಂಗಳೂರು : ಚೈತ್ರಾ ಕುಂದಾಪುರ ವಂಚನೆ ಕೇಸ್ನ ವ್ಯವಹಾರಕ್ಕೂ ನಮಗೂ ಸಂಬಂಧವಿಲ್ಲ. ಈ ಪ್ರಕರಣದಲ್ಲಿ ಸಮಗ್ರ ತನಿಖೆ ಆಗಬೇಕು, ಯಾರೇ ಇದ್ದರೂ ಉಗ್ರ ಶಿಕ್ಷೆ ಆಗಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿ ಅಲ್ಲ, ಯಾರೇ ಇದ್ದರೂ ಅವರ ಬಂಧನ ಆಗಬೇಕು. ಟಿಕೆಟ್ ಕೊಡಿಸ್ತೀವಿ ಅಂತ ಹಣ ಪಡೆದಿರೋದನ್ನ ನಾವು ಗಂಭೀರವಾಗಿ ಪರಿಗಣಿಸ್ತೇವೆ ಎಂದು ತಿಳಿಸಿದರು.
ಬಿಜೆಪಿಗೆ ಇದರಲ್ಲಿ ಯಾವುದೇ ಸಂಬಂಧ ಇಲ್ಲ ಎನ್ನುವುದು ಸ್ಪಷ್ಟ. ಹೋರಾಟ ಹಲವರು ಮಾಡ್ತಾರೆ, ಹಾಗಂತ ಅದಕ್ಕೆಲ್ಲದಕ್ಕೂ ಪಕ್ಷಕ್ಕೆ ಸಂಬಂಧ ಇಲ್ಲ. ತನಿಖೆ ಆಗಲಿ ಎಲ್ಲ ಸ್ಷಷ್ಟ ಆಗಲಿದೆ. ದೊಡ್ಡ ದೊಡ್ಡ ಹೆಸರು ಇದೆ ಅಂತ ಈಗ ಆರೋಪಿ ಸ್ಥಾನದಲ್ಲಿ ಇದ್ದವರು ಹೇಳ್ತಾರೆ. ಆದರೆ, ತನಿಖೆ ಆಗಿ ಅದರ ಸತ್ಯ ಹೊರ ಬರಲಿ ಎಂದು ಬೊಮ್ಮಾಯಿ ಹೇಳಿದರು.
ಟಿಕೆಟ್, ಕ್ಷೇತ್ರದ ಹಂಚಿಕೆ ಚರ್ಚೆ ಆಗಿಲ್ಲ
ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಟಿಕೆಟ್ ಹಂಚಿಕೆ, ಕ್ಷೇತ್ರದ ಹಂಚಿಕೆ ಹಂತ ತಲುಪಿಲ್ಲ. ಸದ್ಯ ಪ್ರಾಥಮಿಕ ಹಂತದಲ್ಲಿದೆ, ಬರುವ ದಿನಗಳಲ್ಲಿ ವರಿಷ್ಠರು ಚರ್ಚಿಸ್ತಾರೆ. ಮೈತ್ರಿ ಸಮಯದಲ್ಲಿ ನಮ್ಮನ್ನು ಮಾತನಾಡಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ವಿರೋಧ ಪಕ್ಷಗಳು ಒಂದಾಗಿ ಹೆಚ್ಚು ಸೀಟ್ ಪಡೆಯುವ ಉದ್ದೇಶ, ಈವರೆಗೆ ನಮ್ಮ ಅಭಿಪ್ರಾಯ ಪಡೆಯುವ ಹಂತಕ್ಕೆ ಬಂದಿಲ್ಲ ಎಂದು ತಿಳಿಸಿದರು.