ಬೆಂಗಳೂರು : ‘ವೀರಪ್ಪ ಮೊಯ್ಲಿ ಅವರು ದೊಡ್ಡ ವಿದ್ವಾಂಸರು, ಕವಿ ಉತ್ತಮರು. ಅವ್ರು ಹೇಳಿದ್ದನ್ನು ಗಮನಿಸಿದ್ದೇನೆ. ರಾಮಾಯಣ ಅನ್ವೇಷಣೆ ಮಾಡಿದ ಮಹಾನುಭಾವ ಅವ್ರು..’ ಎಂದು ಮೊಯ್ಲಿ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ನೆಲಮಂಗಲದಲ್ಲಿ ಮಣ್ಣಿನ ಮಕ್ಕಳಿಂದ ಏನು ದ್ರೋಹ ಆಗಿದೆ ಅಂತ ವೀರಪ್ಪ ಮೊಯ್ಲಿ ಹೇಳಿದ್ದಾರೆ. ಬೇರೆ ರಾಜ್ಯದಿಂದ ಸಾಲ ತಂದು ನೌಕರರಿಗೆ ವೇತನ ಕೊಟ್ಟಿದ್ದರು. ಅವರು ದೊಡ್ಡ ವಿದ್ವಾಂಸರು, ಕವಿ ಉತ್ತಮರು ಹೇಳಿದ್ದನ್ನು ಗಮನಿಸಿದ್ದೇನೆ. ಎಲ್ಲ ನಾನೇ ಮಾಡಿದ್ದು, ನಾನೇ ಅಂತೆಲ್ಲಾ ಹೇಳಿಕೆ ಕೊಟ್ಟಿದ್ದಾರೆ ಎಂದು ಕುಟುಕಿದರು.
ರಾಜ್ಯದಲ್ಲಿ ಕಾವೇರಿ ನೀರು ಹೆಚ್ಚಿಗೆ ಸಿಗಬೇಕಾದರೆ ನಮ್ಮ ಪಾತ್ರ ಏನಿದೆ ಅಂತ ಎಲ್ಲರಿಗೂ ಗೊತ್ತು. ರಾಮಾಯಣ ಅನ್ವೇಷಣೆ ಮಾಡಿದ ಮಹಾನುಭಾವ ಅವ್ರು, ಅವರನ್ನೇ ಕರೆದು ಈಗ ಚರ್ಚೆ ಮಾಡಿ. ಈಗ ನಮ್ಮನ್ನ ಏಕೆ ಕರೆಯುತ್ತೀರಿ? ಕಾವೇರಿ ನೀರು ನಿರ್ವಹಣಾ ಸಮಿತಿ ಸೂಚನೆ ವಿಚಾರವಾಗಿ ಸಭೆ ಕರೆದಿರುವುದು ನನ್ನ ಗಮನಕ್ಕೆ ಬಂದಿದೆ. ನಾನು ಈ ದಿನದ ಸರ್ವ ಪಕ್ಷ ಸಭೆಗೆ ಹೋಗುತ್ತಿಲ್ಲ ಎಂದು ಗರಂ ಆದರು.
MP ಆಗಬೇಕು ಅಂತ ಓಡಾಡ್ತಿದ್ದಾರೆ
ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರ ಎಂಪಿ ಆಗಬೇಕು ಅಂತ ಓಡಾಡುತ್ತಿದ್ದಾರೆ. ಈ ಸರ್ಕಾರಕ್ಕೆ ಜನರ ಹಿತ ರಕ್ಷಣೆ ಮಾಡುವ ಧಮ್ ಇಲ್ಲ. ಬೆಂಗಳೂರಿಗೆ ಹೇಗೆ ನೀರು ತಂದು ಕೊಡುತ್ತಾರೆ? ನೀರನ್ನು ಯಾವ ರೀತಿ ಹಂಚಿಕೆ ಮಾಡಬೇಕು ಅಂತ ತೀರ್ಮಾನ ಮಾಡಬೇಕು. ಮೊಯ್ಲಿ ಅವರ ನಿನ್ನೆಯ ಭಾಷಣ ಕೇಳಿದ್ದೇನೆ ಎಂದು ಟಾಂಗ್ ಕೊಟ್ಟರು.