ಬೆಂಗಳೂರು : ನೀರಾವರಿ ಸಚಿವರು ಇಲ್ಲಿಯವರೆಗೂ ಕೆಆರ್ಎಸ್ ವೀಕ್ಷಣೆಗೆ ಬಂದಿಲ್ಲ, ಸ್ಥಳೀಯ ಶಾಸಕರು, ಸಂಸದರನ್ನು ಕರೆದು ಸಭೆ ಮಾಡಿಲ್ಲ ಎಂದು ಡಿ.ಕೆ ಶಿವಕುಮಾರ್ ವಿರುದ್ಧ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟೆಲ್ಲಾ ಸಮಸ್ಯೆ ಆದರೂ ಸ್ಥಳೀಯರಿಂದ ವರದಿ ಪಡೆದಿಲ್ಲ. ನೀರಾವರಿ ಸಚಿವರು ಈ ರೀತಿ ಯಾಕೆ ಮಾಡುತ್ತಿದ್ದಾರೆ ನನಗೆ ಅರ್ಥವಾಗುತ್ತಿಲ್ಲ ಎಂದು ಬೇಸರಿಸಿದರು.
ಆಗಸ್ಟ್ ತಿಂಗಳಲ್ಲಿ ಸರ್ವ ಪಕ್ಷಗಳ ಸಭೆ ಕರೆಯಬೇಕಿತ್ತು. ಎಲ್ಲರ ಸಲಹೆ ಸೂಚನೆ ಪಡೆದು ತಮಿಳುನಾಡಿಗೆ ಕಾವೇರಿ ನೀರು ಬಿಡಬೇಕಾ? ಬೇಡ್ವಾ? ಅಂತ ತಿರ್ಮಾನ ಮಾಡಬೇಕಿತ್ತು. ಅಂದೇ ತಿರ್ಮಾನ ತಗೆದುಕೊಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಮಂಡ್ಯದಲ್ಲಿ ಈಗಾಗಲೇ ಅರ್ಧ ಬೆಳೆ ನಾಶವಾಗಿದೆ. ರೈತರಿಗೆ ಯಾವ ಪರಿಹಾರ ಎಂಬ ಕ್ಲಾರಿಟಿ ಸಿಗುತ್ತಿಲ್ಲ. ಇದು ಸರ್ಕಾರದ ಜವಾಬ್ದಾರಿ, ಕಾವೇರಿ ಪ್ರಾಧಿಕಾರಕ್ಕೆ ಮನವರಿಕೆ ಮಾಡಲು ಸರ್ಕಾರ ವಿಫಲವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬಿಜೆಪಿ ಹಾಗೂ ಜೆಡಿಎಸ್ ಮೈತ್ತಿ ವಿಚಾರವಾಗಿ ಮಾತನಾಡಿದ ಅವರು, ಪಕ್ಷದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಅಧಿಕೃತ ಮಾಹಿತಿ ಬರುವವರೆಗೂ ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಜಾಣ್ಮೆಯ ಉತ್ತರ ನೀಡಿ ತೆರಳಿದರು.