ಮಂಡ್ಯ : ‘ಪೆನ್ ಕೊಡಿ.. ಪೇಪರ್ ಕೊಡಿ.. ಅಂತ ಬಾಯಿ ಬಡ್ಕೊಂಡೆ. 135 ಜನ ಗೆದ್ದಿದ್ದೇವೆ ಅಂತ ಆಕಾಶದಲ್ಲಿದ್ದೀರಿ, ಭೂಮಿ ಮೇಲೆ ಬರಪ್ಪ..’ ಎಂದು ಡಿಕೆಶಿ ವಿರುದ್ಧ ಮಾಜಿ ಡಿಸಿಎಂ ಡಾ.ಸಿ.ಎನ್ ಅಶ್ವತ್ಥನಾರಾಯಣ ಗುಡುಗಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರು ಅಧಿಕಾರದ ಅಮಲಿನಲ್ಲಿದ್ದಾರೆ. ನಿನ್ನೆವರೆಗೂ ನೀರು ಬಿಟ್ಟು, ಈಗ ಕೋಟೆ ಬಾಗಿಲು ಹಾಕಿಕೊಂಡಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಕುಡಿಯೋಕೆ ನೀರಿಲ್ಲ. ಬಹಳ ಗಟ್ಟಿಯಾಗಿ ಅದನ್ನು ಹೇಳಬೇಕು ಎಂದು ಚಾಟಿ ಬೀಸಿದರು.
ಕುಡಿಯುವ ನೀರಿಗೆ ಸಮಸ್ಯೆ ಇರುವಾಗ, ಕೊಡೋದು ಎಲ್ಲಿಂದ ಬಂತು? ಇರೋ ನೀರನ್ನು ಕುಡಿಯೋದಕ್ಕೆ ಬಳಸಿಕೊಳ್ಳಬೇಕಿದೆ. ನೀರಿನ ಸಮರ್ಪಕ ಬಳಕೆಗೆ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಬಿಜೆಪಿ ಮೇಲೆ ಗೂಬೆ ಕೂರಿಸೋದಕ್ಕೆ ಆಗಲ್ಲ, ಇವರೇ ಗೂಬೆಗಳಾಗಿದ್ದಾರೆ. ಪೆನ್ ಕೊಡಿ, ಪೇಪರ್ ಕೊಡಿ ಅಂತ ಬಾಯಿ ಬಡ್ಕೊಂಡ್ರು. ಸರ್ಕಾರವಾಗಿ ಏನು ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರು ಸಂಪೂರ್ಣ ನಿರ್ನಾಮ
ಬಿಜೆಪಿ ಮಾಜಿ ಕಾರ್ಪೊರೇಟರ್ಸ್‌ಗಳ ಆಪರೇಷನ್ ಬಗ್ಗೆ ಮಾತನಾಡಿ, ಬೆಂಗಳೂರಿನಲ್ಲಿ ಪ್ರಬುದ್ಧ ಮತದಾರ ಇದ್ದಾರೆ. ಬಿಜೆಪಿಗೆ ವೋಟು ಹಾಕ್ತಾರೆ, ಕಾಂಗ್ರೆಸ್ ಏನೇ ಪ್ರಯತ್ನ ಮಾಡಿದ್ರೂ ವೋಟು ಸಿಗಲ್ಲ. ಬೆಂಗಳೂರು ಅಭಿವೃದ್ಧಿ ಮಾಡ್ತಿಲ್ಲ. ಸಂಪೂರ್ಣ ನಿರ್ನಾಮ ಮಾಡ್ತಿದ್ದಾರೆ. ಕೊಲೆ ಸುಲಿಗೆ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಹೆಚ್ಚು ಕ್ರೈಮ್ ಆಗ್ತಿದೆ. ಕಳೆದ ಬಾರಿಗಿಂತ ಈ ಬಾರಿ 4% ವೋಟ್ ಹೆಚ್ಚಾಗಿದೆ. ಬಿಜೆಪಿ ಬಿಟ್ಟು ಯಾರೂ ಹೋಗಲ್ಲ. ತಮ್ಮ ತಟ್ಟೆಗೆ ಮಣ್ಣು ಹಾಕಿಕೊಳ್ಳುವ ಕೆಲಸ ಯಾರೂ ಮಾಡಿಕೊಳ್ಳಲ್ಲ ಎಂದು ಕುಟುಕಿದರು.