Monday, December 23, 2024

ನಷ್ಟ ತುಂಬಿಕೊಡಿ ಅಂದ್ರೆ ಆಗುತ್ತಾ? ಅದು ಸಾಧ್ಯವಾಗದ ಮಾತು : ಸಿದ್ದರಾಮಯ್ಯ

ಮೈಸೂರು : ನಷ್ಟ ಆಗುವುದು ಬಿಡುವುದು ಬೇರೆ. ನಷ್ಟ ತುಂಬಿಕೊಡಿ ಅಂದ್ರೆ ಆಗುತ್ತಾ? ಅದು ಸಾಧ್ಯವಾಗದ ಮಾತು. ಈಡೇರಿಸುವಂತೆ ಬೇಡಿಕೆ ಕೇಳಿದ್ರೆ ಮಾಡಬಹುದು. ಅವರು ಈಡೇರಿಸಲಾಗದ ಬೇಡಿಕೆ ಇಟ್ಟರೆ ಹೇಗೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಖಾಸಗಿ ವಾಹನ ಮಾಲೀಕ, ಚಾಲಕರ ಮುಷ್ಕರದ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಹಿಳೆಯರಿಗೆ ಅನುಕೂಲ ಆಗಲು ಶಕ್ತಿ ಯೋಜನೆ ತಂದಿದ್ದೇವೆ. ಇದರಿಂದ ಖಾಸಗಿ ಬಸ್‌ಗಳಿಗೆ ಅವರು ಬರುತ್ತಿಲ್ಲ ಎನ್ನುತ್ತಾರೆ. ಈಗಾಗಿ ಅವರಿಗೆ ನಷ್ಟ ಆಗುತ್ತಿದೆ ಎನ್ನುವುದು ಅವರ ವಾದ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶ ಇದೆ. ಅದನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ಮಾಡಲಿ ಎಂದು ಹೇಳಿದರು.

ಕಾವೇರಿ ನೀರು ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ಖುಷಿಯಿಂದ ನೀರು ಬಿಡುತ್ತಿಲ್ಲ. ಪ್ರಾಧಿಕಾರದ ಆದೇಶ ಇರುವ ಕಾರಣ ಅನಿವಾರ್ಯವಾಗಿ ನೀರು ಬಿಡುತ್ತಿದ್ದೇವೆ. ತಮಿಳುನಾಡು ವಿನಾಕಾರಣ ಖ್ಯಾತೆ ತೆಗೆದಿದೆ. ಸೆಪ್ಟಂಬರ್ 21ರಂದು ಕೋರ್ಟ್ ನಲ್ಲಿ ನಮ್ಮ ಸಂಕಷ್ಟ ವಿವರಿಸುತ್ತೇವೆ. ಬಿಜೆಪಿ ಇದರಲ್ಲಿ ರಾಜಕಾರಣ ಮಾಡಲ್ಲ ಅಂತ ಹೇಳಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಕುಟುಕಿದರು.

ಪ್ರಧಾನಿ ಭೇಟಿಗೆ ದಿನಾಂಕ ಸಿಗುತ್ತಿಲ್ಲ

ಪ್ರಧಾನಿ ನರೇಂದ್ರ ಮೋದಿ ಬಳಿ ನಿಯೋಗ ಹೋಗಲು ನಾವು ಸಿದ್ಧರಿದ್ದೆವು. ನಮಗೂ ಪ್ರಧಾನಿ ಭೇಟಿಗೆ ದಿನಾಂಕ ಸಿಗುತ್ತಿಲ್ಲ. ಬಿಜೆಪಿಯವರಾದರೂ ಹೋಗಿ ಕೇಳಲಿ ಅಂದರೆ ಅವರೂ ಕೇಳುತ್ತಿಲ್ಲ. ಇಲ್ಲಿ ಕುಳಿತು ಹೋರಾಟದ ಕಥೆ ಹೇಳುತ್ತಿದ್ದಾರೆ. ನಾವು ರೈತರ ರಕ್ಷಣೆಗೆ ಈಗಲೂ ಬದ್ಧ ಎಂದು ಸಿದ್ದರಾಮಯ್ಯ ಹೇಳಿದರು.

RELATED ARTICLES

Related Articles

TRENDING ARTICLES