Thursday, January 23, 2025

ಬಾಡಿ ಹೋದ ‘ಹೂ ಬೆಳೆಗಾರ’ರ ಮುಖ : ಸಾಲ-ಸೋಲ ಮಾಡಿ ಬೆಳೆದ ಹೂ ರಸ್ತೆಗೆ!

ಕೋಲಾರ : ಶ್ರಾವಣ ಮಾಸವೆಂದರೇ ಸಾಲು-ಸಾಲು ಹಬ್ಬಗಳ ತಿಂಗಳು. ಈ ಹಿನ್ನೆಲೆ ಅಧಿಕ ಹೂವಿನ ಬೇಡಿಕೆ ಇರುತ್ತೆ ಅಂತ ನಿರೀಕ್ಷೆ ಮಾಡಿ ಕೋಲಾರದಲ್ಲಿ ಹೂ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೂವಿನ ಪೂರೈಕೆಗಿಂತ ಬೇಡಿಕೆ ಕಡಿಮೆ ಇದ್ದು, ಹೂಗಳ ಬೆಲೆ ಕುಸಿತ ಕಂಡಿದೆ. ಹೂವುಗಳಿಗೆ ಸಾಕಷ್ಟು ಬೇಡಿಕೆ ಬರಲಿದೆ, ಉತ್ತಮ ಬೆಲೆ ಸಿಗುತ್ತದೆ ಎಂಬ ರೈತರ ನಿರೀಕ್ಷೆ ದಿಢೀರ್‌ ಬೆಲೆ ಕುಸಿತದಿಂದ ಹುಸಿಯಾಗಿದೆ. ಹೂ ಬೆಳೆಗಾರರ ಮುಖ ಬಾಡಿ ಹೋಗಿದ್ದು, ಹೂವನ್ನು ರಸ್ತೆಗೆ ಎಸೆದು ನಿರಾಸೆ ವ್ಯಕ್ತಪಡಿಸಿದ್ದಾರೆ.

ಹೂವುಗೆ ಬೇಡಿಕೆ ಇರುತ್ತೆ ಎನ್ನುವ ಕಾರಣಕ್ಕೆ ಕೋಲಾರ ಜಿಲ್ಲಾದ್ಯಂತ ಸೇವಂತಿ, ಚೆಂಡು ಹೂ, ಗುಲಾಬಿಯನ್ನು ಮಿತಿ ಮೀರಿ ನಾಟಿ ಮಾಡಲಾಗಿತ್ತು. ನಿರೀಕ್ಷೆಯಂತೆ ಉತ್ತಮ ಫಸಲು ಬಂದಿದೆ. ಆದರೆ, ವರಮಹಾಲಕ್ಷ್ಮಿ ಹಬ್ಬದವರೆಗೂ ಇದ್ದ ಬೆಲೆ ಈಗ ದಿಢೀರ್‌ ಕುಸಿದಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.

ಸಾಲಸೋಲ ಮಾಡಿ ಬೆಳೆದ ಹೂ ರಸ್ತೆಗೆ

ಇನ್ನು ಕೋಲಾರ ಜಿಲ್ಲೆಯಲ್ಲಿ ಉಪ ಬೆಳೆಯಾಗಿ ರೈತರು ಹೂ ಬೆಳೆಯುತ್ತಾರೆ. ಇಲ್ಲಿ ಬೆಳೆಯುವ ಹೂವು ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡಿಗೂ ರವಾನೆಯಾಗುತ್ತದೆ. ಈ ಬಾರಿ ಶ್ರಾವಣ ಮಾಸ ಮುಗಿಯುತ್ತಿದ್ದರೂ ಹೂವು ಬೆಲೆಯಲ್ಲಿ ಸುಧಾರಣೆಯಾಗಿಲ್ಲ.

ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಹೂವು ಬರುತ್ತಿದೆ. ಆದರೆ, ರೈತರ ನಿರೀಕ್ಷೆಯಂತೆ ಹೂ ಮಾರಾಟವಾಗ್ತಿಲ್ಲ. ಹೂ ಬೆಳೆ ಬೆಳೆಯಲು ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಹೂ ಬೆಳೆಗೆ ಬೇರೆ ಕೃಷಿಗಿಂತಲೂ ಹೆಚ್ಚಿನ ಆರೈಕೆ ಮಾಡಬೇಕಾಗಿದೆ. ಇಷ್ಟಾದರೂ ಬೆಳೆದ ಹೂವಿಗೆ ಬೆಲೆಯಿಲ್ಲದೆ, ರಸ್ತೆಗೆ ಸುರಿಯುವ ದುಃಸ್ಥಿತಿ ರೈತರಿಗೆ ಒದಗಿದೆ.

ಒಟ್ನಲ್ಲಿ, ಹಬ್ಬಗಳ ಸೀಸನ್​​ನಲ್ಲಿ ನಾಲ್ಕು ಕಾಸು ದುಡೀಬಹುದು ಅಂತ ಹೂ ಬೆಳೆದಿದ್ದ ರೈತನ ಮುಖ ಬಾಡಿ ಹೋಗಿದೆ. ಸಾಲ-ಸೋಲ ಮಾಡಿ ಬೆಳೆದ ಹೂ ಬೆಳೆಯನ್ನು ರಸ್ತೆಗೆ ಎಸೆದು ವಾಪಸ್​ ಮನೆ ಕಡೆ ತೆರಳಬೇಕಾಗಿದ್ದು, ರೈತರ ಮನದಲ್ಲಿ ದುಃಖ ಮಡುಗಟ್ಟಿದೆ.

RELATED ARTICLES

Related Articles

TRENDING ARTICLES