Wednesday, January 22, 2025

ಮಾಜಿ ಸಿಎಂ ತವರಲ್ಲಿ ಮಳೆ ಕೊರತೆ : ಬೆಳೆ ನಾಶಕ್ಕೆ ಮುಂದಾದ ಅನ್ನದಾತ!

ಹಾವೇರಿ : ಕೃಷಿ ಪ್ರಧಾನವಾದ ಜಿಲ್ಲೆಯ ರೈತರ ಬೆಳೆಗೆ ಜೀವ ನೀಡುವ ಹಿನ್ನೆಲೆ ಹಾವೇರಿ ಜಿಲ್ಲೆ ಶಾಸಕರು ಮೋಡ ಬಿತ್ತನೆ ಮಾಡಿದ್ರು. ಆದರೂ, ಏಲಕ್ಕಿ ನಾಡಿನಲ್ಲಿ ರೈತರ ಗೋಳು ಹೇಳತೀರದಾಗಿದೆ. ಬೆಳೆದ ಬೆಳೆಯನ್ನ ಸ್ವತಃ ರೈತನೇ ನಾಶ ಮಾಡಲು ಮುಂದಾಗಿದ್ದಾನೆ.

ಹಾವೇರಿ ಜಿಲ್ಲೆಯಾದ್ಯಂತ ಬೆಳೆ ನಾಶದ ಪರ್ವ ಆರಂಭವಾಗಿದೆ. ಮುಂಗಾರು ಮಳೆ ತಡವಾಗಿ ಬಂದು ರೈತರ ಬಾಳಿನಲ್ಲಿ ಕತ್ತಲೆ ಆವರಿಸುವಂತೆ ಮಾಡಿದೆ‌. ಹಾವೇರಿ ಜಿಲ್ಲೆಯ ಬಹುತೇಕ ತಾಲೂಕಿನ ಗ್ರಾಮದ ರೈತರು ತಾವು ಬೆಳೆದ ಬೆಳೆಯನ್ನು ರೋಟರ್​ನಿಂದ ನಾಶ ಮಾಡ್ತಿದ್ದಾರೆ.

ಮಗುವಂತೆ ಪಾಲನೆ ಮಾಡಿದ್ದ ಬೆಳೆಗೆ ಕತ್ತರಿ

ಜೂನ್ ಬಳಿಕ ಜಿಲ್ಲೆಯಲ್ಲಿ ಮಳೆ ಬಾರದೆ ಬೆಳೆದ ಬೆಳೆಗೆ ವಿವಿಧ ರೋಗ ಬರುತ್ತಿದೆ. ಈ ಹಿನ್ನೆಲೆ ಹತ್ತಿ, ಜೋಳ, ಸೋಯಾಬಿನ್, ಮೆಣಸಿನಕಾಯಿ, ಟೊಮೆಟೋ, ಸೌತೆಕಾಯಿ ಹೀಗೆ ವಿವಿಧ ಬೆಳೆಯನ್ನು ರೈತರು ನಾಶ ಮಾಡ್ತಿದ್ದಾರೆ‌. ತಿಂಗಳ ಇಡೀ ಹೊಲದಲ್ಲಿ ದುಡಿದು ಮಗುವಂತೆ ಪಾಲನೆ ಮಾಡಿದ್ದ ಬೆಳೆಗೆ ಸ್ವತಃ ರೈತರೆ ಈಗ ಕತ್ತರಿ ಹಾಕಿದ್ದಾರೆ.

ಪರಿಹಾರ ನೀಡುವಂತೆ ರೈತನ ಅಳಲು

ರೈತನಿಗೆ ಬೇರೆ ಮಾರ್ಗ ಇಲ್ಲದೆ ಸ್ವತಃ ತಾನು ತಿಂಗಳಿಡೀ ಪಾಲನೆ ಮಾಡಿದ ಬೆಳೆ ನಾಶ ಮಾಡಲು ಮುಂದಾಗಿದ್ದಾನೆ. ಇನ್ನು ಕೃಷಿ ನಂಬಿ ಜೀವನ ಮಾಡುವ ಕೃಷಿಕರಿಗೆ ಒಂದೊತ್ತಿನ ಊಟಕ್ಕೂ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಈ ಕಾರಣ ಜಿಲ್ಲೆಯ ಅನ್ನದಾತರು ರಾಜ್ಯ ಸರ್ಕಾರಕ್ಕೆ ಬರ ಘೋಷಣೆ ಮಾಡಿ ಬೆಳೆ ಪರಿಹಾರ ನೀಡುವಂತೆ ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ಒಟ್ಟಿನಲ್ಲಿ, ಕೃಷಿ ಪ್ರಧಾನವಾದ ಹಾವೇರಿ ಜಿಲ್ಲೆಯ ರೈತರು ಆತಂಕದಲ್ಲಿದ್ದಾರೆ. ಇನ್ನಾದರು ರಾಜ್ಯ ಸರ್ಕಾರ ಜಿಲ್ಲೆಯನ್ನ ಬರ ಪೀಡಿತ ಜಿಲ್ಲೆಯೆಂದು ಘೋಷಿಸಿ ರೈತರಿಗೆ ಬೆಳೆ ಪರಿಹಾರ ನೀಡುತ್ತಾ ಕಾದು ನೋಡಬೇಕಿದೆ.

RELATED ARTICLES

Related Articles

TRENDING ARTICLES